ಆಶ್ವಾಸನೆಗಳಲ್ಲಷ್ಟೇ ಅಭಿವೃದ್ಧಿ– ಲೋಬೊ ಲೇವಡಿ

7
ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಆಶ್ವಾಸನೆಗಳಲ್ಲಷ್ಟೇ ಅಭಿವೃದ್ಧಿ– ಲೋಬೊ ಲೇವಡಿ

Published:
Updated:
Deccan Herald

ಮಂಗಳೂರು: ‘ಸಣ್ಣ ಕೆಲಸವನ್ನೂ ಮಾಡಿಸಲು ಶಕ್ತರಲ್ಲದ ನಿಮ್ಮಂತಹ ಸಂಸದರು ನಮ್ಮ ಕೇತ್ರಕ್ಕೆ ಬೇಕೆ? ಫ್ಲೈ ಓವರ್‌, ರಸ್ತೆ ದುರಸ್ತಿ ಕಾಮಗಾರಿಯಂತಹ ಚಿಕ್ಕಪುಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಲು ಬರದ ನಿಮ್ಮಿಂದ ಮಂಗಳೂರು ನಗರ ಹಾಗೂ ಜಿಲ್ಲೆಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ’ ಎಂದು ಮಾಜಿ ಶಾಸಕ ಲೋಬೊ ಅವರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಮೊನಚು ಮಾತುಗಳಿಂದ ಇರಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಗಳೂರು ದಕ್ಷಿಣ ಬ್ಲಾಕ್‌ ಹಾಗೂ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಆಶ್ರಯದಲ್ಲಿ ‘ಮೇಲ್ಸೇತುವೆ ಕಾಮಗಾರಿ ವಿಳಂಬ ನೀತಿ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ’ ನಗರದ ಪಂಪ್‌ವೆಲ್‌ ಬಳಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿ ಎರಡು ಅವಧಿ ಪೂರೈಸುತ್ತಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ, ಯಾವ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ ಎಂಬುದನ್ನು ಈಗಲಾದರೂ ತಿಳಿಸಬೇಕು.   ಬಿಕರ್ನಕಟ್ಟೆಯಲ್ಲಿರುವ ಕಿರಿದಾದ ರಸ್ತೆಯಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗೆಯೇ, ನಂತೂರು ಸರ್ಕಲ್‌ನಲ್ಲಿನ ಸಂಚಾರ ಸಂಕಟವನ್ನು ಕಡಿಮೆ ಮಾಡಲು ಅಲ್ಲೊಂದು ಅಂಡರ್‌ಪಾಸ್‌ ಅಥವಾ ಮೇಲ್ಸೇತುವೆ ಮಾಡಿಸುವುದಕ್ಕೆ ಇನ್ನೂ ಎಷ್ಟು ಸಮಯ ಬೇಕು ಅಥವಾ ಅಲ್ಲಿ ಇನ್ನೂ ಎಷ್ಟು ಹೆಣ ಬೀಳಬೇಕು ತಿಳಿಸಲಿ. ಕೆಪಿಟಿ ಸರ್ಕಲ್‌ನ ನಿರಂತರವಾಗಿರುವ ಸಂಚಾರ ಅವ್ಯವಸ್ಥೆಗೆ ಏನು ಪರಿಹಾರ ಒದಗಿಸುತ್ತೀರಾ’ ಎಂದು ಪ್ರಶ್ನಿಸಿದರು.

‘ಮಂಗಳೂರಿನಿಂದ ಉಡುಪಿ, ಕಾರ್ಕಳ, ತಲಪಾಡಿಗೆ ಹೋಗುವ ಮುಖ್ಯರಸ್ತೆಗಳ ಪಾಡು ಹೇಳ ತೀರುವಂತಿಲ್ಲ. ಹಿಂದಿನ ಯುಪಿಎ ಸರ್ಕಾರ ಮಂಜೂರು ಮಾಡಿದ ಕಾಮಗಾರಿಗಳನ್ನೂ ಪೂರ್ಣಗೊಳಿಸುವುದಕ್ಕೆ ಇಷ್ಟು ಸಮಯ ಸಾಕಾಗದ ಸಂಸದರು ಈಗ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಬಳಿಗೆ ಹೋಗಿ, ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಮತ್ತು ಮೀನುಗಾರಿಕಾ ಜೆಟ್ಟಿ ನಿರ್ಮಾಣವನ್ನು ಶೀಘ್ರವೇ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. ಇಂತಹ ದುಸ್ಥಿತಿ ಇರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದೆ. ಕೇಂದ್ರ ಸರ್ಕಾರದ ಸಾಧನೆ ಏನಿದ್ದರೂ ಕೇವಲ ಆಶ್ವಾಸನೆಗಳಲ್ಲಷ್ಟೇ; ಕೃತಿಯಲ್ಲಿ ಏನೂ ಇಲ್ಲ’ ಎಂದು ಕಟಕಿಯಾಡಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಶಾಲೆಟ್‌ ಪಿಂಟೋ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !