ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಯಲ್ಲಿ ಕಲ್ಲು, ಹುಣಿಸೆಬೀಜ, ಪಂಚಕಜ್ಜಾಯದ ಪುಡಿ

ಕೊಯಿಲ; ಅನ್ನಭಾಗ್ಯದ ಅಕ್ಕಿ ಕಳಪೆ ಆರೋಪ
Published 14 ಸೆಪ್ಟೆಂಬರ್ 2023, 15:57 IST
Last Updated 14 ಸೆಪ್ಟೆಂಬರ್ 2023, 15:57 IST
ಅಕ್ಷರ ಗಾತ್ರ

ಕಡಬ : ಕಡಬ ತಾಲ್ಲೂಕಿನ ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖೆಗೆ ಸರಬರಾಜು ಆಗಿರುವ ಅಕ್ಕಿ ಕಳಪೆಯಾಗಿದ್ದು, ಅಕ್ಕಿಯಲ್ಲಿ ನಿರುಪಯುಕ್ತ ವಸ್ತುಗಳು ಕಂಡು ಬಂದಿವೆ.

ಆಲಂಕಾರಿನಲ್ಲಿರುವ ಆಹಾರ ಇಲಾಖೆಯ ಗೋದಾಮಿನಿಂದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿಸಿದ್ದ 300 ಅಕ್ಕಿ ಮೂಟೆ ಕೊಯಿಲ ಪಡಿತರ ವಿಭಾಗಕ್ಕೆ ಸೋಮವಾರ ಸರಬರಾಜು ಆಗಿದೆ. ಬುಧವಾರ ಬೆಳಿಗ್ಗೆ ಪಡಿತರ ವಿತರಿಸಲು ಚೀಲ ತೆರೆದಾಗ 4 ಗೋಣಿ ಚೀಲದಲ್ಲಿ ಹುಣಸೆ ಬೀಜ, ಪ್ಲಾಸ್ಟಿಕ್‌ ಲಕೋಟೆಯಲ್ಲಿ ತುಂಬಿಸಿದ್ದ ಕೆಂಪು ಕಲ್ಲು, ಗೋದಿ ಮಿಶ್ರಣದ ದೇವರ ಪ್ರಸಾದಂತಿರುವ ವಸ್ತುಗಳು ಕಾಣಿಸಿವೆ. ಗುರುವಾರ ಮತ್ತೆ ಒಂದು ಚೀಲದಲ್ಲಿ ಇಂಥದೇ ವಸ್ತುಗಳು ಪತ್ತೆಯಾಗಿದೆ.

ಅಧಿಕಾರಿಗಳು ಭೇಟಿ: ಸ್ಥಳಕ್ಕೆ ಕಡಬ ತಾಲ್ಲೂಕು ಆಹಾರ ನಿರೀಕ್ಷಕ ಶಂಕರ್, ಆಹಾರ ಇಲಾಖೆಯ ಗೋದಾಮು ವ್ಯವಸ್ಥಾಪಕ ಚಂದ್ರಹಾಸ, ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ, ರಾಮಕುಂಜ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಇದ್ದರು.

ಗುಣಮಟ್ಟದ ಅಕ್ಕಿ ವಿತರಿಸಲು ಸೂಚನೆ: ಕೊಯಿಲ ನ್ಯಾಯಬೆಲೆ ಅಂಗಡಿಗೆ ಸರಬರಾಜು ಆಗಿರುವ ಕಳಪೆ ಅಕ್ಕಿಯನ್ನು ವಿತರಿಸದೆ ಗುಣಮಟ್ಟದ ಅಕ್ಕಿಯನ್ನು ಮಾತ್ರ ವಿತರಿಸಲು ಸೂಚಿಸಲಾಗಿದೆ. ಕಳಪೆ ಅಕ್ಕಿ ಮೂಟೆಯನ್ನು ವಾಪಸ್‌ ಕಳುಹಿಸಲಾಗುವುದು. ಈ ಬಗ್ಗೆ ಮೇಲಧಿಕಾರಿಗಳಿಗೆ ಮೌಕಿಕವಾಗಿ ತಿಳಿಸಿದ್ದು, ವರದಿಯನ್ನೂ ಸಲ್ಲಿಸಲಾಗುವುದು ಎಂದು ಕಡಬ ಆಹಾರ ನಿರೀಕ್ಷಕ ಎಂ.ಎಲ್.ಶಂಕರ ತಿಳಿಸಿದ್ದಾರೆ.

ದೂರು: ನಮ್ಮ ಸಹಕಾರ ಸಂಘಕ್ಕೆ ಸಂಬಂಧಿಸಿದ ಕೊಯಿಲ ಶಾಖೆಗೆ 300 ಪ್ಲಾಸ್ಟಿಕ್ ಚೀಲ ಅಕ್ಕಿ ಸರಬರಾಜು ಆಗಿದೆ. ಈ ಪೈಕಿ ಈಗಾಗಲೇ ನಾಲ್ಕು ಚೀಲದಲ್ಲಿ ಕಳಪೆ ಅಕ್ಕಿ ಕಂಡು ಬಂದಿದೆ. ಇನ್ನೆಷ್ಟು ಚೀಲದಲ್ಲಿ ಇಂಥ ನಿರುಪಯುಕ್ತ ವಸ್ತುಗಳನ್ನು ತುಂಬಿಸಲಾಗಿದೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಕಳಪೆ ಅಕ್ಕಿ ಪೂರೈಕೆ ಮಾಡಿರುವ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಲಾಗುವುದು ಎಂದು ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್ ತಿಳಿಸಿದ್ದಾರೆ.

ಕಡಬ ತಾಲ್ಲೂಕಿನ ಕೊಯಿಲ ಶಾಖೆಗೆ ಸರಬರಾಜು ಆಗಿರುವ ಅಕ್ಕಿಯಲ್ಲಿ ಹುಣಸೆ ಬೀಜ ಕೆಂಪು ಕಲ್ಲು ತುಂಬಿಸಿದ ಲಕೋಟೆಯ ಕಟ್ಟು ಪತ್ತೆಯಾಗಿದೆ
ಕಡಬ ತಾಲ್ಲೂಕಿನ ಕೊಯಿಲ ಶಾಖೆಗೆ ಸರಬರಾಜು ಆಗಿರುವ ಅಕ್ಕಿಯಲ್ಲಿ ಹುಣಸೆ ಬೀಜ ಕೆಂಪು ಕಲ್ಲು ತುಂಬಿಸಿದ ಲಕೋಟೆಯ ಕಟ್ಟು ಪತ್ತೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT