ಬುಧವಾರ, ಆಗಸ್ಟ್ 17, 2022
23 °C
ಕೊರೊನಾ ವಾರಿಯರ್ಸ್‌ಗೆ ಗೌರವ ಅರ್ಪಣೆ

ವಿಪತ್ತು ನಿರ್ವಹಣೆಯಲ್ಲಿ ಸರ್ಕಾರ ವಿಫಲ: ರಮಾನಾಥ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡಬ(ಉಪ್ಪಿನಂಗಡಿ): ಕೋವಿಡ್-19 ವಿಪತ್ತು ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವನ್ನು
ಕಂಡು ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ವರದಿ ಕೇಳಿರುವುದು ಅಧಿಕಾರಸ್ಥರಿಗೆ ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಕಡಬ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕೊರೊನಾ ವಾರಿಯರ್ಸ್‌ನ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಜನರಿಗೆ ಲಸಿಕೆ ವಿತರಿಸುವಲ್ಲೂ ವಿಫಲವಾಗಿರುವ ಸರ್ಕಾರ, ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಬದಲಾಗಿ, ಕೈಚೆಲ್ಲಿ ಕುಳಿತಿದೆ ಎಂದರು.

ಆಶಾ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಬರದಿದ್ದರೂ ಅವರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಸರ್ಕಾರ ಪೆಟ್ರೋಲ್, ವಿದ್ಯುತ್ ದರ ಹೆಚ್ಚಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ದೂರಿದರು.

ಆಹಾರ ಸಾಮಗ್ರಿ ಕಿಟ್ ಪ್ರಾಯೋಜಿಸಿದ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಾತನಾಡಿ, ‘ಕೋವಿಡ್ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಅಕ್ಕಿ, ದಿನಸಿ ಸಾಮಗ್ರಿ, ಆಂಬುಲೆನ್ಸ್, ಔಷಧಗಳನ್ನು ವಿತರಿಸುತ್ತಿದೆ’ ಎಂದರು.

ಸುಳ್ಯ ವಿಧಾಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣಪ್ಪ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಡಾ.ರಘು, ಕೆ.ಪಿ. ಥಾಮಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಸತೀಶ್ ನಾಕ್, ಹನೀಫ್ ಕೆ.ಎಂ, ಅಶ್ರಫ್ ಶೇಡಿಗುಂಡಿ ಇದ್ದರು.

ಗೃಹ ರಕ್ಷಕ ದಳದ ಸಿಬ್ಬಂದಿ, ಸಮುದಾಯ ಆಸ್ಪತ್ರೆಯ ಅರೆಕಾಲಿಕ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಪತ್ರಕರ್ತರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಲಾಯಿತು.

ಕಾಂಗ್ರೆಸ್ ವತಿಯಿಂದ ಕೋವಿಡ್ ಸೋಂಕಿತರಿಗಾಗಿ ವ್ಯವಸ್ಥೆಗೊಳಿಸಿದ ಆಂಬುಲೆನ್ಸ್ ಚಾಲಕ ರಂಜಿತ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.