ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ: ₹ 25ಲಕ್ಷ ಪರಿಹಾರ ಪಾವತಿಗೆ ಕೋರ್ಟ್ ಆದೇಶ

Last Updated 8 ಆಗಸ್ಟ್ 2020, 15:45 IST
ಅಕ್ಷರ ಗಾತ್ರ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಸುಳ್ಳು ಸಂದೇಶ ಪ್ರಸಾರ ಮಾಡಿರುವ ತಪ್ಪಿಗೆ ಕ್ಷೇತ್ರಕ್ಕೆ ₹ 25 ಲಕ್ಷ ಪರಿಹಾರ ಪಾವತಿಸುವಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ.ಸೋಮನಾಥ ನಾಯಕ್‌ ಅವರಿಗೆ ಬೆಳ್ತಂಗಡಿಯ ಹಿರಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯ ಆದೇಶಿಸಿದೆ.

ಧರ್ಮಸ್ಥಳ ದೇವಸ್ಥಾನದ ಹಿಂದಿನ ವ್ಯವಸ್ಥಾಪಕ ಎನ್‌.ಆರ್‌. ಉಡುಪ ಅವರು 2013ರ ಫೆ.25ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಬಿ.ಕೆ. ನಾಗೇಶಮೂರ್ತಿ ಅವರು ಆ. 4ರಂದು ಈ ಆದೇಶ ಹೊರಡಿಸಿದ್ದಾರೆ. ಪರಿಹಾರದ ಮೊತ್ತ ಪಾವತಿಗೆ ಮೂರು ತಿಂಗಳ ಗಡುವು ವಿಧಿಸಲಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಕುರಿತು ಯಾವುದೇ ಹೇಳಿಕೆ, ಪ್ರಕಟಣೆ ನೀಡದಂತೆ ನ್ಯಾಯಾಲಯ ಸೋಮನಾಥ ನಾಯಕ್‌ ಅವರಿಗೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಅದನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ 2013ರಲ್ಲೇ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ₹ 4.97 ಲಕ್ಷ ದಂಡ ವಿಧಿಸಿತ್ತು.

‘ಆ ಬಳಿಕವೂ ನಾಯಕ್‌, ಧರ್ಮಸ್ಥಳದ ಆರ್ಥಿಕ ವ್ಯವಹಾರಗಳು, ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಹಾಗೂ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದ ಉಡುಪ, ಎರಡು ಮೊಬೈಲ್‌ ಎಸ್‌ಎಂಎಸ್‌ಗಳನ್ನು ಉಲ್ಲೇಖಿಸಿದ್ದರು. ₹ 25 ಲಕ್ಷ ಪರಿಹಾರ ಮತ್ತು ಅದನ್ನು ಪಾವತಿಸುವವರೆಗೆ ಶೇ 18ರ ದರದಲ್ಲಿ ಬಡ್ಡಿ ಪಾವತಿಗೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಿದ್ದರು.

ಆ.4ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶರು, ‘ಸೋಮನಾಥ ನಾಯಕ್‌ ತಪ್ಪಿತಸ್ಥರು’ ಎಂಬ ಅಭಿಪ್ರಾಯದೊಂದಿಗೆ ₹ 25 ಲಕ್ಷ ಪರಿಹಾರವನ್ನು ಅರ್ಜಿದಾರರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಬಡ್ಡಿ ಪಾವತಿಗೆ ಆದೇಶಿಸಬೇಕೆಂಬ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT