ಮಂಗಳವಾರ, ಜುಲೈ 27, 2021
27 °C
ಮತ್ತೆ ಆರು ಮಂದಿ ಗುಣಮುಖ: 23 ಜನರಲ್ಲಿ ಕೋವಿಡ್‌–19 ದೃಢ

400 ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌದಿ ಅರೇಬಿಯಾದಿಂದ ಬಂದ 21 ಜನರು ಸೇರಿದಂತೆ ಗುರುವಾರ 23 ಮಂದಿಗೆ ಕೋವಿಡ್‌–19 ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 409ಕ್ಕೆ ಏರಿದೆ. ಈ ಮಧ್ಯೆ ಮತ್ತೆ 6 ಜನರು ಗುಣಮುಖರಾಗಿದ್ದಾರೆ.

ಇದೇ 8 ರಂದು ಸೌದಿ ಅರೇಬಿಯಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 22 ವರ್ಷದ ಯುವಕ, 23 ವರ್ಷದ ಇಬ್ಬರು ಯುವಕರು, 25 ವರ್ಷದ ಪುರುಷ, 50 ಮತ್ತು 52 ವರ್ಷದ ಪುರುಷರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇದೇ 11 ರಂದು ಸೌದಿಯಿಂದ ಬಂದಿದ್ದ 23 ವರ್ಷದ ಮೂವರು ಯುವಕರು, 24, 25 ವರ್ಷದ ಯುವಕರು, 27 ವರ್ಷದ ಇಬ್ಬರು ಪುರುಷರು, 30, 35, 36, 38,39, 45 ಪುರುಷರು ಹಾಗೂ 44 ಮತ್ತು 48 ವರ್ಷದ ಮಹಿಳೆಯರಿಗೆ ಕೋವಿಡ್–19 ದೃಢವಾಗಿದೆ.

ಇನ್ನು ಮುಂಬೈನಿಂದ ಬಂದಿದ್ದ 2 ವರ್ಷದ ಬಾಲಕಿಗೆ ಈಗಾಗಲೇ ಸೋಂಕು ದೃಢವಾಗಿದ್ದು, ಈ ಬಾಲಕಿಯ ಸಂಪರ್ಕದಿಂದ 28 ಮತ್ತು 34 ವರ್ಷದ ಪುರುಷರಿಗೆ ಸೋಂಕು ತಗುಲಿದೆ.

400 ರ ಗಡಿ: ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ದೃಢವಾಗಿರುವ ಪ್ರಕರಣಗಳ ಸಂಖ್ಯೆ 409 ಕ್ಕೆ ಏರಿಕೆಯಾಗಿದೆ. ಈ ಮೂಲಕ 400 ರ ಗಡಿಯನ್ನು ದಾಟಿದಂತಾಗಿದೆ. ಈ ಪೈಕಿ ಇದೇ 1 ರಿಂದ ದುಬೈ ಹಾಗೂ ಸೌದಿ ಅರೇಬಿಯಾದಿಂದ ಬಂದವರಲ್ಲಿ 188 ಜನರಿಗೆ ಕೋವಿಡ್–19 ದೃಢವಾಗಿದೆ.

ವಂದೇ ಭಾರತ್‌ ಮಿಷನ್‌ ಹಾಗೂ ಬಾಡಿಗೆ ವಿಮಾನಗಳ ಮೂಲಕ ವಿದೇಶಗಳಿಂದ ಕನ್ನಡಿಗರು ಬರುತ್ತಿದ್ದು, ಅವರನ್ನು ನಗರದ ವಿವಿಧ ಹೋಟೆಲ್‌ ಹಾಗೂ ಸರ್ಕಾರಿ ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ. ಇದರ ಜತೆಗೆ ಜಿಲ್ಲಾಡಳಿತದ ವತಿಯಿಂದ ವಿದೇಶದಿಂದ ಬಂದವರು ಹಾಗೂ ಮುಂಬೈ ಸೇರಿದಂತೆ ಅಂತರರಾಜ್ಯದಿಂದ ಹಿಂದಿರುಗಿದವರು ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಮತ್ತಷ್ಟು ತೀವ್ರಗೊಳಿಸಲಾಗಿದೆ.

ಇದುವರೆಗೆ 11,356 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 11,300 ವರದಿಗಳು ಬಂದಿವೆ. ಅದರಲ್ಲಿ 10,891 ಮಂದಿಯ ವರದಿ ನೆಗೆಟಿವ್‌ ಬಂದಿದ್ದು, 409 ಜನರಿಗೆ ಸೋಂಕು ದೃಢವಾಗಿದೆ.

6 ಜನರು ಗುಣಮುಖ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಆರು ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಗುಣಮುಖರಾದವರ ಸಂಖ್ಯೆ 176 ಕ್ಕೆ ಏರಿಕೆಯಾಗಿದೆ.

ಇದೇ 6 ರಂದು ಮುಂಬೈನಿಂದ ಬಂದಿದ್ದ 52 ವರ್ಷದ ವ್ಯಕ್ತಿ, ಮೇ 20 ರಂದು ಮುಂಬೈನಿಂದ ಬಂದಿದ್ದ 46 ವರ್ಷದ ಪುರುಷ, ಇದೇ 2 ರಂದು ಸೌದಿಯಿಂದ ಬಂದಿದ್ದ ಕಾರ್ಕಳದ 29 ವರ್ಷದ ಯುವಕ, 24 ಮತ್ತು 28 ವರ್ಷದ ಯುವಕರು ಹಾಗೂ ರೋಗಿ ಸಂಖ್ಯೆ 4256 ರ ಸಂಪರ್ಕದಿಂದ ಸೋಂಕು ತಗುಲಿದ್ದ 12 ವರ್ಷದ ಬಾಲಕ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಕಾಸರಗೋಡು: 11 ಮಂದಿ ಗುಣಮುಖ

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಮೂವರಲ್ಲಿ ಕೋವಿಡ್‌–19 ದೃಢಪಟ್ಟಿದ್ದು, 11 ಮಂದಿ ಗುಣಮುಖರಾಗಿದ್ದಾರೆ.

ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದ್ದು, ಈ ಪೈಕಿ 276 ಮಂದಿ ಗುಣಮುಖರಾಗಿದ್ದಾರೆ. 108 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉದುಮ, ಚೆಂಗಳ, ಪಡನ್ನ ನಿವಾಸಿಗಳಲ್ಲಿ ಗುರುವಾರ ಸೋಂಕು ಪತ್ತೆಯಾಗಿದೆ. ಮೂವರು ವಿದೇಶದಿಂದ ಬಂದವರಾಗಿದ್ದಾರೆ. ಮೂರನೇ ಹಂತದಲ್ಲಿ ಸೋಂಕಿತರ ಸಂಖ್ಯೆ 206 ಕ್ಕೆ ತಲುಪಿದ್ದು, ಬಹುತೇಕ ಮಂದಿ ವಿದೇಶ ಹಾಗೂ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. 126 ಮಂದಿ ಮಹಾರಾಷ್ಟ್ರದಿಂದ ಬಂದ್ದಿದರೆ, 63 ಮಂದಿ ವಿದೇಶದಿಂದ ಬಂದವರಲ್ಲಿ ಸೋಂಕು ದೃಢವಾಗಿದೆ. 11 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.