ಭಾನುವಾರ, ಜುಲೈ 25, 2021
22 °C
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ನಿರ್ದೇಶನದಂತೆ ಕ್ರಮ

ಕೋವಿಡ್‌ ಹಾಟ್‌ಸ್ಪಾಟ್‌ ಮ್ಯಾಪಿಂಗ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉಳ್ಳಾಲ ನಗರಸಭೆ ಪ್ರದೇಶ, ಬಂಟ್ವಾಳ ಪುರಸಭೆಯ ಕೆಲವು ವಾರ್ಡ್‌ಗಳು, ಪುತ್ತೂರು ನಗರಸಭೆಯ ಪ್ರದೇಶ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಕೋವಿಡ್‌ ಸೋಂಕಿನ ಪ್ರಕರಣಗಳು ಕಂಡುಬರುವ ‘ಹಾಟ್‌ಸ್ಪಾಟ್‌’ಗಳನ್ನು ‘ಮ್ಯಾಪಿಂಗ್‌’ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಿಸುತ್ತಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ‘ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರ ನಿರ್ದೇಶನದಂತೆ ‘ಮ್ಯಾಪಿಂಗ್‌’ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ 300 ಸ್ವಯಂಸೇವಕರ ತಂಡವನ್ನು ಸಜ್ಜುಗೊಳಿಸಲಾಗಿದೆ. ಸೋಮವಾರದಿಂದ ಹಾಟ್‌ಸ್ಪಾಟ್‌ಗಳ ಎಲ್ಲ ಮನೆಗಳಿಗೂ ಭೇಟಿ ನೀಡುವ ಈ ತಂಡ, ವಿವಿಧ ರೀತಿಯ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ, ಮಾಹಿತಿ ದಾಖಲಿಸಲಿದೆ’ ಎಂದರು.

ಉಳ್ಳಾಲ ನಗರಸಭೆಯಲ್ಲಿ ಈವರೆಗೆ 174 ಪ್ರಕರಣಗಳು ದೃಢಪಟ್ಟಿವೆ. ಬಂಟ್ವಾಳ ಪುರಸಭೆಯ 30, 40, 41, 45, 47 ಮತ್ತು 57ನೇ ವಾರ್ಡ್‌ನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಪುತ್ತೂರು ನಗರಸಭೆ ವ್ಯಾಪ್ತಿಯೂ ಹಾಟ್‌ಸ್ಪಾಟ್‌ನಲ್ಲಿ ಸೇರಿದೆ ಎಂದು ತಿಳಿಸಿದರು.

ಈ ಪ್ರದೇಶಗಳಿಗೆ ಭೇಟಿ ನೀಡುವ ಸ್ವಯಂಸೇವಕರಿಗೆ ಪಲ್ಸ್‌ ಆಕ್ಸಿಮೀಟರ್‌ ಮತ್ತು ಥರ್ಮಲ್‌ ಸ್ಕ್ಯಾನರ್‌ ಒದಗಿಸಲಾಗುವುದು. ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದರೆ ಈ ತಂಡ ವರದಿ ನೀಡಲಿದೆ. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ ಎಂದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರು ಇರುವ 413 ಕಂಟೈನ್ಮೆಂಟ್‌ ವಲಯಗಳಿವೆ. ಅಲ್ಲಿಗೆ ಆಶಾ ಕಾರ್ಯಕರ್ತೆಯರು ನಿತ್ಯವೂ ಭೇಟಿ ನೀಡುತ್ತಿದ್ದು, ವರದಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಆಂಬುಲೆನ್ಸ್‌: ‘ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಹತ್ತು ಆಂಬುಲೆನ್ಸ್‌ಗಳನ್ನು ಸನ್ನದ್ಧವಾಗಿ ಇಡಲಾಗಿದೆ. ಶೀಘ್ರದಲ್ಲಿ ಇನ್ನೂ ಐದು ಆಂಬುಲೆನ್ಸ್‌ ಖರೀದಿಸಲಾಗುವುದು. ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಿಸಲು 20 ಆಂಬುಲೆನ್ಸ್‌ಗಳನ್ನು ಮೀಸಲಿಡಲಾಗುವುದು. ಒಂದು ಶವ ಸಾಗಿಸಲು ಎರಡು ಆಂಬುಲೆನ್ಸ್‌ ಬೇಕಾಗುತ್ತದೆ. ಒಂದರಲ್ಲಿ ಶವ ಸಾಗಿಸಿದರೆ, ಮತ್ತೊಂದರಲ್ಲಿ ಶವಸಂಸ್ಕಾರಕ್ಕೆ ನಿಯೋಜಿತರಾದವರನ್ನು ಕರೆದೊಯ್ಯಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿವರ ನೀಡಿದರು.

ಆಂಬುಲೆನ್ಸ್‌ಗಳ ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ ತಂಡವೊಂದನ್ನು ನೇಮಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ದೂರವಾಣಿ ಸಂಖ್ಯೆಯೊಂದನ್ನು ಒದಗಿಸಲಾಗುವುದು. ಖಾಸಗಿ ಆಂಬಲೆನ್ಸ್‌ ಸೇವೆ ಒದಗಿಸುತ್ತಿರುವ ಎಲ್ಲರನ್ನೂ ಈ ಸಂಖ್ಯೆಯ ಮೂಲಕ ಒಂದೇ ವೇದಿಕೆಗೆ ತರಲಾಗುವುದು. ಸೋಂಕಿತರನ್ನು ಕೋವಿಡ್‌ ಚಿಕಿತ್ಸಾ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಸ್ಥಳಾಂತರಿಸುವಲ್ಲಿ ಯಾವುದೇ ತೊಂದರೆ ಆಗದಂತೆ ಈ ತಂಡ ಕಾರ್ಯನಿರ್ವಹಿಸಲಿದೆ ಎಂದರು.

35 ವಿಮಾನಗಳ ಆಗಮನ: ವಿದೇಶಗಳಿಂದ ಈವರೆಗೆ 35 ವಿಮಾನಗಳಲ್ಲಿ 5,483 ಜನರು ಮಂಗಳೂರಿಗೆ ಬಂದಿಳಿದಿದ್ದಾರೆ. ಹೊರ ರಾಜ್ಯಗಳಿಂದ 7,563 ಜನರು ಜಿಲ್ಲೆಗೆ ಬಂದಿದ್ದಾರೆ. ಹೋಂ ಕ್ವಾರಂಟೈನ್‌ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ 70 ಪ್ರಕರಣ ದಾಖಲಿಸಲಾಗಿದೆ. 879 ಜನರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. 40 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಶಿಫಾರಸು ಅಗತ್ಯ:

ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್‌ ಮಾತನಾಡಿ, ‘ಕೋವಿಡ್‌–19 ಸೋಂಕಿತರು ಆಯುಷ್ಮಾನ್‌ ಭಾರತ್‌ ಯೋಜನೆಯ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ಸಂಬಂಧಿಸಿದ ಅಧಿಕಾರಿಗಳ ಶಿಫಾರಸು ಇದ್ದರೆ ಮಾತ್ರ ಈ ಸೌಲಭ್ಯ ದೊರಕುತ್ತದೆ’ ಎಂದರು.

ಆಂಟಿಜೆನ್‌ ಕಿಟ್‌ ಲಭ್ಯ

‘ಜಿಲ್ಲೆಗೆ ಆಂಟಿಜೆನ್‌ ಕಿಟ್‌ಗಳ ಪೂರೈಕೆಯಾಗಿದೆ. ಕೋವಿಡ್‌ ಸೋಂಕಿನ ಶಂಕಿತ ಲಕ್ಷಣಗಳಿರುವವರು ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆಗೆ ಅವುಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದರು.

ಯಾವುದೇ ಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ. ಮೊಬೈಲ್‌ ಆ್ಯಪ್‌ ಮತ್ತು ಮಂಗಳೂರು ಸ್ಮಾರ್ಟ್‌ ಸಿಟಿಯ ಕಮಾಂಡ್‌ ಕೇಂದ್ರದಲ್ಲಿ ಆರಂಭಿಸಿರುವ ಸಹಾಯವಾಣಿಯಲ್ಲಿರುವ ಅಧಿಕಾರಿಗಳು ನಿತ್ಯವೂ ಅವರೊಡನೆ ಸಂಪರ್ಕದಲ್ಲಿದ್ದು, ನಿಗಾ ಇರಿಸುತ್ತಾರೆ. ಸೋಂಕಿತರಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು