ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ದಕ್ಷಿಣ ಕನ್ನಡ: 13 ಮಂದಿಯಲ್ಲಿ ಕೋವಿಡ್‌–19 ಸೋಂಕು ದೃಢ
Last Updated 20 ಜೂನ್ 2020, 9:20 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ತಗುಲಿ, ಚಿಕಿತ್ಸೆಯಲ್ಲಿದ್ದ 30 ಮಂದಿ ಗುಣಮುಖರಾಗಿದ್ದು, ಶುಕ್ರವಾರ ಎಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿದೇಶದಿಂದ ಬಂದ 11 ಜನರು ಸೇರಿದಂತೆ 13 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

‘ಕೋವಿಡ್‌–19 ತಗುಲಿದ್ದ ವಿವಿಧ ವಯೋಮಾನದ 17 ಪುರುಷರು, 10 ಮಹಿಳೆಯರು, 1 ವರ್ಷ ವಯಸ್ಸಿನ ಇಬ್ಬರು ಮತ್ತು ಎರಡು ವರ್ಷ ವಯಸ್ಸಿನ ಒಬ್ಬ ಮಕ್ಕಳು ಗುಣಮುಖರಾಗಿದ್ದಾರೆ. ಎಲ್ಲರನ್ನೂ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಮನೆಗಳಿಗೆ ಕಳುಹಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಗುಣಮುಖರಾದವರಲ್ಲಿ 55 ಮತ್ತು 53 ವರ್ಷದ ಪುರುಷರು ಅತಿಹೆಚ್ಚಿನ ವಯಸ್ಸಿನವರು. ಉಳಿದಂತೆ 16ರಿಂದ 48ರ ನಡುವಿನ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲರಿಗೂ ವೆನ್ಲಾಕ್‌ ಕೋವಿಡ್‌–19 ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 206 ಮಂದಿ ಕೋವಿಡ್‌–19 ಸೋಂಕಿತರು ಗುಣಮುಖರಾಗಿದ್ದಾರೆ.

13 ಮಂದಿಯಲ್ಲಿ ಸೋಂಕು ಪತ್ತೆ: ಶುಕ್ರವಾರ 118 ಜನರ ಗಂಟಲಿನ ದ್ರವದ ಮಾದರಿಗಳ ವರದಿಗಳು ಲಭಿಸಿವೆ. ಈ ಪೈಕಿ 13 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. 105 ಜನರ ವರದಿಗಳು ‘ನೆಗೆಟಿವ್‌’ ಆಗಿವೆ.

ಜೂನ್‌ 11ರಂದು ಸೌದಿ ಅರೇಬಿಯಾದಿಂದ ಬಂದಿದ್ದು, ಕ್ವಾರಂಟೈನ್‌ನಲ್ಲಿದ್ದ 43, 22, 23 ಮತ್ತು 22 ವರ್ಷದ ಪುರುಷರು ಹಾಗೂ ಜೂನ್‌ 16ರಂದು ಶಾರ್ಜಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 34, 24, 34, 27, 38, 21 ಮತ್ತು 55 ವರ್ಷದ ಮಹಿಳೆಯರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಎಲ್ಲರ ವರದಿಗಳು ಶುಕ್ರವಾರ ಲಭಿಸಿದ್ದು, 11 ಜನರಲ್ಲೂ ಸೋಂಕು ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಶೀತ ಜ್ವರದಿಂದ ಬಳಲುತ್ತಿದ್ದು (ಐಎಲ್‌ಐ) ಆಸ್ಪತ್ರೆಗೆ ದಾಖಲಾಗಿದ್ದ 78 ವರ್ಷದ ವೃದ್ಧ ಹಾಗೂ 22 ವರ್ಷದ ಯುವಕನ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ.

ಹೊರ ರಾಜ್ಯ, ಹೊರ ಜಿಲ್ಲೆಗಳ 10 ಜನರೂ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 422 ಮಂದಿಯಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿದೆ. ಎಂಟು ಮಂದಿ ಮೃತಪಟ್ಟಿದ್ದಾರೆ. 206 ಜನರು ಗುಣಮುಖರಾಗಿದ್ದು, 208 ಜನರಿಗೆ ಕೋವಿಡ್‌ ವಿಶೇಷ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ 70 ವರ್ಷ ವಯಸ್ಸಿನ ಪುರುಷ (ಪಿ–6282) ರೋಗಿ ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಇವರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. 52 ವರ್ಷ ವಯಸ್ಸಿನ ಪುರುಷ (ಪಿ–6283) ರೋಗಿ ಮಧುಮೇಹ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರಿಗೂ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT