ಬುಧವಾರ, ಸೆಪ್ಟೆಂಬರ್ 22, 2021
29 °C
ಕುಕ್ಕೆ ದೇವಳದಲ್ಲಿ ಇಂದಿನಿಂದ ಸೇವೆಗಳು ಆರಂಭ

29ರಿಂದ ಸರ್ಪಸಂಸ್ಕಾರ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 27ರಿಂದ ಭಕ್ತರ ವಿವಿಧ ಸೇವೆಗಳು ಆರಂಭಗೊಳ್ಳಲಿವೆ. ಆದರೆ, ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು 29ರಿಂದ ಪ್ರಾರಂಭಗೊಳ್ಳಲಿವೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. 

ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಭಕ್ತರಿಗೆ ಭೋಜನ ಪ್ರಸಾದ ವಿತರಣೆಯಾಗಲಿದೆ. ಬೆಳಿಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆ ತನಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರಾರ್ಥನೆ, ತುಲಾಭಾರ ಆರಂಭ: 27ರಿಂದ ತುಲಾಭಾರ, ಶೇಷ ಸೇವೆ, ಪ್ರಾರ್ಥನೆ, ಇಡೀ ದಿನದ ಮಹಾಪೂಜೆ, ಮಧ್ಯಾಹ್ನದ ಮಹಾಪೂಜೆ, ಪವಮಾನಯುಕ್ತ ಪಂಚಾಮೃತಾಭಿಷೇಕ, ಕಲಶಪೂಜಾಯುಕ್ತ ಪಂಚಾಮೃತಾಭಿಷೇಕ, ಚವಲ ಹರಕೆ, ಹಣ್ಣುಕಾಯಿ ಸಮರ್ಪಣೆ, ವಾಹನಪೂಜೆ, ಹರಿವಾಣ ನೈವೇದ್ಯ, ಚಿತ್ರಾನ್ನ ಸಮರ್ಪಣೆ, ಹಾಲುಪಾಯಸ, ಸಹಸ್ರನಾಮಾರ್ಚನೆ, ಅಷ್ಟೋತ್ತರ ಅರ್ಚನೆ, ಮೃಷ್ಠಾನ್ನ ಸಂತರ್ಪಣೆ, ಸಂತರ್ಪಣೆ, ನಂದಾದೀಪ, ಮಂಗಳಾರತಿ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಕಾರ್ತಿಕ ಪೂಜೆ ಸೇವೆಗಳು ಆರಂಭಗೊಳ್ಳಲಿದೆ. ಅಲ್ಲದೆ, ದೇವಳದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗಿದೆ. ಲಡ್ಡು, ಪಂಚ ಕಜ್ಜಾಯ ಪ್ರಸಾದ, ತೀರ್ಥ ಬಾಟ್ಲಿ ವಿತರಣೆ ಆರಂಭಗೊಳ್ಳಲಿದೆ.

29ರಿಂದ ದೇವಳದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಸೇವೆಗಳು ಆರಂಭಗೊಳ್ಳಲಿದೆ. ಸೇವಾರ್ಥಗಳು ಕನಿಷ್ಠ ಕೋವಿಡ್ ಪ್ರಥಮ ಡೋಸ್ ಲಸಿಕೆ ಪಡೆದಿರಬೇಕು ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ ವರದಿ ಹಾಜರು ಪಡಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಅಂತರ ಪಾಲನೆ ಮಾಡಬೇಕು. ಪ್ರತಿ ಟಿಕೇಟಿಗೆ 2 ಭಕ್ತರಿಗೆ ಮಾತ್ರ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಸರ್ಪಸಂಸ್ಕಾರ ಕ್ರಿಯಾಕರ್ತರು ಕೂಡಾ ಕೋವಿಡ್-19 ಲಸಿಕೆ ಪಡೆದು ಕ್ರಿಯಾಧಿಗಳನ್ನು ನೆರವೇರಿಸಲಿದ್ದಾರೆ.

2 ಹಂತದಲ್ಲಿ 180 ಸರ್ಪಸಂಸ್ಕಾರ:

ಇಷ್ಟರ ತನಕ ಒಂದು ತಂಡದಲ್ಲಿ ನಡೆಯುತ್ತಿದ್ದ ಸರ್ಪಸಂಸ್ಕಾರ ಸೇವೆಯು ಗುರುವಾರದಿಂದ ಪ್ರತಿದಿನ ಎರಡು ತಂಡದಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಒಂದನೇ ಸರದಿ ಹಾಗೂ ಎರಡನೇ ಸರದಿಯು 10 ಗಂಟೆಗೆ ಆರಂಭಗೊಳ್ಳಲಿದೆ. ಪ್ರತಿ ಸರದಿಯಲ್ಲಿ 90ರಂತೆ ಎರಡು ಸರದಿಯಲ್ಲಿ ಒಟ್ಟು 180 ಸರ್ಪಸಂಸ್ಕಾರ ಸೇವೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸರದಿಯಲ್ಲಿ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದ 60 ಮಂದಿಗೆ, ಡಿ.ಡಿ, ಎಂ.ಒ ಮಾಡಿದ 10 ಭಕ್ತರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ 30 ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಸುಮಾರು 6,400 ಮಂದಿ ಸರ್ಪಸಂಸ್ಕಾರ ಸೇವೆಯನ್ನು ಆನ್‌ಲೈನ್ ಮೂಲಕ ಮುಂಗಡವಾಗಿ ಕಾದಿರಿಸಿದ್ದಾರೆ.  ಅವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹಾಗಿದ್ದೂ ಸೇವಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಕಾರ್ಯನಿರ್ವಹಣಾಧಿಕಾರಿಗಳ ಅನುಮತಿ ಪಡೆದು ಆಯಾಯ ದಿನದಲ್ಲಿ ಬಂದು ಸೇವೆಗೆ ಅವಕಾಶ ಕಲ್ಪಿಸಲಾಗುವುದು.

4 ಸರದಿಯಲ್ಲಿ 240 ಆಶ್ಲೇಷ ಬಲಿ: ಪ್ರತಿದಿನ 4 ಸರದಿಯಲ್ಲಿ ಒಟ್ಟು 240 ಭಕ್ತರಿಗೆ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆ ತನಕ, 8.15 ರಿಂದ 9.30 ತನಕ, 9.45 ರಿಂದ 11.15ರ ತನಕ ಹಾಗೂ ಸಂಜೆ 5 ಗಂಟೆಯಿಂದ 6.30 ತನಕ ಸೇವೆ ನಡೆಯಲಿದೆ. ಪ್ರತಿ ಸರದಿಯಲ್ಲಿ 60 ಭಕ್ತರಂತೆ 4 ಸರದಿಯಲ್ಲಿ 240 ಭಕ್ತರು ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ.

ಪ್ರತಿ ದಿನ ಸರ್ಪಸಂಸ್ಕಾರ ಸೇವೆಗೆ ಸಂಬಂಧಪಟ್ಟ 180 ನಾಗಪ್ರತಿಷ್ಠೆಯೊಂದಿಗೆ ಪ್ರತ್ಯೇಕ 25 ಭಕ್ತರಿಗೆ ನಾಗಪ್ರತಿಷ್ಠೆ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ಪ್ರತಿ ದಿನ 3 ಭಕ್ತರಿಗೆ ಮಹಾಭಿಷೇಕ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು