ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣ: ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ

ಬೆಳ್ತಂಗಡಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ
Last Updated 6 ಮೇ 2021, 5:00 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಕೋವಿಡ್ ನಿಯಂತ್ರಣಕ್ಕೆ ಬೆಳ್ತಂಗಡಿಯಲ್ಲಿ ಅಧಿಕಾರಿಗಳು ಒಟ್ಟಾಗಿ ಶ್ರಮಿಸಬೇಕು. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಇಲ್ಲಿನ ಮಂಜುನಾಥ ಕಲಾಭವನ ದಲ್ಲಿ ಬುಧವಾರ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಶಾಸಕರ ನೇತೃತ್ವದಲ್ಲಿ ನಡೆಯುವ ಕಾವಲುಪಡೆ ಸಭೆಗೆ ಎಲ್ಲಾ ಗ್ರಾಮಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಜಾಗೃತರಾಗಬೇಕು. ಇಲಾಖೆಯಲ್ಲಿ ಸಮನ್ವಯತೆ ಇಲ್ಲದಿದ್ದರೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಕಾರ್ಯಪಡೆ ಸಭೆಯನ್ನು ಕಾಟಾಚಾರಕ್ಕೆ ಮಾಡುವುದಲ್ಲ. ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ನಿಯತ್ತಿನಿಂದ ಕೆಲಸ ಮಾಡಿದರೆ ಕೋವಿಡ್ ನಿಯಂತ್ರಣ ಮಾಡಬಹುದು’ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್‌ ನಿಯಂತ್ರಣಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಖ್ಯಮಂತ್ರಿ ಕೂಡ ನಿರಂತರವಾಗಿ ಶ್ರಮಿಸುತ್ತಿದ್ದಾರೆ’ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ‘ತಾಲ್ಲೂಕು ಸಮುದಾಯ ಆಸ್ಪತ್ರೆಗೆ 50 ಬೆಡ್‌ಗಳ ಅವಶ್ಯಕತೆ ಇದೆ. ಅಲ್ಲದೆ, ಲಸಿಕೆ ಕೊರತೆಯಿದ್ದು, ಜಿಲ್ಲಾಡಳಿತ ಸ್ಪಂದಿಸಬೇಕು. ವೆಂಟಿಲೇಟರ್ ಇರುವ ಆಂಬುಲೆನ್ಸ್‌ ಕೂಡ ಅಗತ್ಯವಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಉಜಿರೆ ಟಿಬಿ ಸೆಂಟರ್‌ ಅನ್ನು 200 ಬೆಡ್‌ಗಳ ಕೋವಿಡ್ ಕೇಂದ್ರವನ್ನಾಗಿ ನೀಡಿದ್ದಾರೆ. ಅಲ್ಲದೆ, ರಜತಾದ್ರಿಯನ್ನು ನೀಡಲು ಮುಂದೆ ಬಂದಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ.ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯಾಗಲಿ, ಖಾಸಗಿ ಆಸ್ಪತ್ರೆಯಾಗಲಿ ಜ್ವರ ಇನ್ನಿತರ ಕಾಯಿಲೆಗೆ ರೋಗಿಗಳು ಬಂದಾಗ ಪರೀಕ್ಷಿಸಬೇಕು. ಆರೋಗ್ಯದ ವಿಷಯದಲ್ಲಿ ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸಬಾರದು’ ಎಂದರು.

ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು, ಸಂಘಸಂಸ್ಥೆಗಳ ಪ್ರಮುಖರು ಸಲಹೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT