ಸೋಮವಾರ, ಜೂನ್ 14, 2021
28 °C
ಖಾಸಗಿಯಲ್ಲಿ ಲಸಿಕೆ ಪಡೆದವರು ಸರ್ಕಾರಿ ಆಸ್ಪತ್ರೆಗಳಲ್ಲೂ ಪಡೆಯಬಹುದು

ಲಸಿಕೆ: ಒಂದೇ ಕಡೆ ನಿರ್ಬಂಧ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌ ತಡೆ ಲಸಿಕೆಗೆ ಕೊರತೆ ಇದೆ ಎನ್ನುವ ದೂರು ಕೇಳಿ ಬರುತ್ತಿವೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಇದನ್ನು ನಿರಾಕರಿಸಿದ್ದಾರೆ.

‘ಕೋವಿಡ್‌ ತಡೆ ಲಸಿಕೆಗಳ ಲಭ್ಯ ಪ್ರಮಾಣಕ್ಕಿಂತ ಹೆಚ್ಚು ಜನರು ಅದನ್ನು ಪಡೆಯಲು ಬರುತ್ತಿರುವುದರಿಂದ ಲಸಿಕೆ ಕೊರತೆ ಇದ್ದಂತೆ ಭಾಸವಾಗುತ್ತದೆ. ಯಾರು, ಎಲ್ಲಿ ಬೇಕಿದ್ದರೂ ಲಸಿಕೆ ಪಡೆಯಬಹುದು’ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಶೀಲ್ಡ್‌, ಕೊವ್ಯಾಕ್ಸಿನ್‌ ಮುಂತಾದ ಲಸಿಕೆಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಕೊರತೆ ಇಲ್ಲ. ಒಂದೆಡೆ ಲಭ್ಯ ಇಲ್ಲವಾದರೆ, ಇನ್ನೊಂದೆಡೆ ಪಡೆಯಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ಹಣ ತೆತ್ತು ಮೊದಲ ಡೋಸ್‌ ಲಸಿಕೆ ಪಡೆದವರು, ಎರಡನೇ ಡೋಸ್‌ ಲಸಿಕೆ ಅಲ್ಲಿ ಇಲ್ಲವಾದರೆ, ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದು. ಹೀಗಾಗಿ ‘ಲಸಿಕೆ ಇಲ್ಲ, ಹೀಗಾಗಿ ಪಡೆದಿಲ್ಲ, ಅದರಿಂದಾಗಿ ವಿಳಂಬವಾಗಿದೆ’ ಎಂಬಿತ್ಯಾದಿ ಕಾರಣಗಳಿಗೆ ಅವಕಾಶ ಇಲ್ಲ ಎಂದು ಆರ್‌ಸಿಎಚ್‌ ಅಧಿಕಾರಿ ರಾಜೇಶ್‌ ಮಾಹಿತಿ ನೀಡಿದರು.

‘ಲಸಿಕೆ ನಿಗದಿತ ಪ್ರಮಾಣದಲ್ಲೇ ಲಭ್ಯ ಇದೆ. ಆದರೆ ಮೊದಲೆಲ್ಲ ಲಭ್ಯ ಇರುವ ಲಸಿಕೆ ಪಡೆಯಲು ಜನರೇ ಬರುತ್ತಿರಲಿಲ್ಲ. ಈಗ ಅದೇ ಪ್ರಮಾಣ ದಲ್ಲಿ ಲಸಿಕೆ ಡೋಸ್‌ಗಳ ಲಭ್ಯವಾಗಿ ದ್ದರೂ ದುಪ್ಪಟ್ಟು ಜನರು ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಸರದಿ ಸಾಲು ನಿಲ್ಲುತ್ತಿದ್ದಾರೆ. ಬೇಡಿಕೆ ಹೆಚ್ಚಿರುವು ದರಿಂದ ಲಸಿಕೆ ಕೊರತೆ ಇದೆಯೇನೊ ಎಂಬ ಅನಿಸಿಕೆ ಸಹಜ’ ಎಂದರು.

‘ಕೋವಿಡ್‌ ತಡೆ ಲಸಿಕೆ ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ, ಜನರು ಸ್ವಯಂಪ್ರೇರಿತ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 8,142 ಮಂದಿ ಲಸಿಕೆ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೇ ತಿಂಗಳಲ್ಲಿ ಹೊಸ ದರ: ಖಾಸಗಿ ಆಸ್ಪತ್ರೆಗಳಲ್ಲಿ ಈಗ ಪ್ರತಿ ಡೋಸ್‌ ಲಸಿಕೆಗೆ ₹250 ರಂತೆ ಹಾಕಿಸಲಾಗುತ್ತದೆ. ಸರ್ಕಾರ ₹150ಕ್ಕೆ ಅವರಿಗೆ ವಿತರಿಸುತ್ತಿದೆ. ಆದರೆ ಮೇ ತಿಂಗಳಿಂದ ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ಉತ್ಪಾದಕ ಕಂಪನಿಗಳಿಂದಲೇ ಖರೀದಿಸಬೇಕಿದೆ. ಹೀಗಾಗಿ ಹೊಸ ದರ ನಿಗದಿಯಾಗುವ ಸಾಧ್ಯತೆ ಇದೆ.

ಇಲ್ಲಿ ಲಸಿಕೆ ಲಭ್ಯ: ಮಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಯ 10 ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ತಡೆ ಲಸಿಕೆ ಹಾಕಿಸಲು ಸೌಲಭ್ಯ ಕಲ್ಪಿಸಲಾಗಿದೆ. ಜೆಪ್ಪು, ಎಕ್ಕೂರು, ಪಡೀಲ್‌, ಬಿಜೈ, ಬಂದರು, ಬೆಂಗ್ರೆ, ಕೂಳೂರು (ಕುಂಜತ್ತಬೈಲ್‌), ಶಕ್ತಿನಗರ, ಕುಳಾಯಿ, ಸುರತ್ಕಲ್‌  ಮುಂತಾದೆಡೆ ಲಸಿಕೆ ಪಡೆಯಲು ಅವಕಾಶ ಇದೆ. ಜನರು ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ದೂರವಾಣಿ ಸಹಿತ ಸ್ಥಳದಲ್ಲೇ ನೋಂದಾಯಿಸಿ ಲಸಿಕೆ ಪಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು