ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಿ ಮೇಲಿನ ಸೌಧ ಸಂಸ್ಕೃತಿಯೇ?: ಡಾ.ರವಿ

ಜಿಲ್ಲೆಯ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಸಭೆ
Last Updated 3 ಜುಲೈ 2018, 16:13 IST
ಅಕ್ಷರ ಗಾತ್ರ

ಪುತ್ತೂರು: ‘ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವಾಗ, ಕೆಲವೇ ವಿದ್ಯಾರ್ಥಿಗಳ ರ‍್ಯಾಂಕ್ ಪಟ್ಟಿ ಮುಂದಿಟ್ಟು ಸಂಭ್ರಮ ಪಡುವುದು ಸರಿಯಲ್ಲ. ಸಮಾಧಿ ಮೇಲೆ ಸೌಧ ಕಟ್ಟೋದು ಸಂಸ್ಕೃತಿಯಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್. ರವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪುತ್ತೂರು ಸೇಂಟ್‌ ಫಿಲೋಮಿನ ಪ್ರೌಢಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ 504 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಇಳಿಸುವುದು ನಮ್ಮ ಗುರಿಯಾಗಬೇಕು. ಈ ವರ್ಷ ಜಿಲ್ಲೆಯಲ್ಲಿ ಅನುತ್ತೀರ್ಣ ಸಂಖ್ಯೆ ಇಳಿಮುಖವಾಗಿದೆ. 3 ವರ್ಷಬಳಿಕ ಫಲಿತಾಂಶ ಏರಿಕೆಯಾಗಿದೆ. ಇದು ನಿಜವಾದ ಸಾಧನೆ. ಮುಂದಿನ ವರ್ಷಕ್ಕೆ ಅನುತ್ತೀರ್ಣ ಸಂಖ್ಯೆಯನ್ನು ಅರ್ಧದಷ್ಟು ಇಳಿಕೆ ಮಾಡಲು ಸಾಧ್ಯವಾದರೆ ಅದು ನಿಜಕ್ಕೂ ಶ್ಲಾಘನೀಯ ಸಾಧನೆ. ಇದಕ್ಕಾಗಿ ಈಗಲೇ ಕ್ರಿಯಾ ಯೋಜನೆ ತಯಾರಿಸಿಕೊಳ್ಳಿ’ ಎಂದು ಕಿವಿ ಮಾತು ಹೇಳಿದರು.

‘ಕೆಲವೇ ಜನ ರ‍್ಯಾಂಕ್ ಪಡೆಯೋದು. ಅದೆಷ್ಟೋ ಜನ ಫೇಲ್ ಆಗೋದು. ಇದು ಖುಷಿಯ ವಿಚಾರವಲ್ಲ. ಎಲ್ಲರನ್ನೂ ಜತೆಯಾಗಿ ಕೊಂಡೊಯ್ಯುವುದೇ ಶಿಕ್ಷಣದ ಗುರಿ. ಸಮಸ್ಯೆ ಜತೆ ಬದುಕಬೇಕಾ ಅಥವಾ ಸಮಸ್ಯೆಯನ್ನು ಮೆಟ್ಟಿ ನಿಲ್ಲಬೇಕಾ ಎಂಬುದನ್ನು ನಿರ್ಧರಿಸಿ. ಶಿಕ್ಷಕನಿಗೆ ಸಿನಿಕತನ ಯಾವತ್ತೂ ಬರಲೇಬಾರದು. ಹಾಗೇನಾದರೂ ಬಂದರೆ ಆತ ಒಂದು ಪೀಳಿಗೆಯನ್ನೇ ಸಾಯಿಸಿ ಬಿಡುತ್ತಾನೆ’ ಎಂದು ಎಚ್ಚರಿಸಿದರು. ಜಿಲ್ಲಾ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ರೀಡರ್ ದಿವಾಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ‘ಫಲಿತಾಂಶ ಹೆಚ್ಚಿಸಲು ಆರಂಭದಲ್ಲಿ ಹೆಚ್ಚಿನ ಶಕ್ತಿ ಪ್ರಯೋಗ ಮಾಡಬೇಕು. ನಂತರ ಕಡಿಮೆ ಶ್ರಮ ಸಾಕಾಗುತ್ತದೆ’ ಎಂದರು.

ಅಭಿನಂದನೆ: ಜಿಲ್ಲೆಯಲ್ಲಿರುವ 504 ಪ್ರೌಢಶಾಲೆಗಳ ಪೈಕಿ 74 ಶಾಲೆಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದಿದ್ದು, ಈ ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸತತ 7ನೇ ಬಾರಿ ಶೇ 100 ಸಾಧನೆ ಮಾಡಿರುವ ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕರೆ ಸರ್ಕಾರಿ ಪ್ರೌಢಶಾಲೆಯ ಸಾಧನೆಯನ್ನು ಶ್ಲಾಘಿಸಲಾಯಿತು

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ವೈ. ಶಿವರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಫಿಲೋಮಿನಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಂಚಾಲಕ ಆಲ್ಫ್ರೆಡ್ ಜೆ. ಪಿಂಟೋ, ಡಯಟ್ ಪ್ರಾಚಾರ್ಯ ಸಿಪ್ರಿಯನ್ ಮೊಂತೇರೊ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಕನ್ಯಾ ಡಿ.ಎನ್.ಪುತ್ತೂರು, ಗುರುಪ್ರಸಾದ್ ಬೆಳ್ತಂಗಡಿ, ಶಿವಪ್ರಕಾಶ್ ಬಂಟ್ವಾಳ, ಲೋಕೇಶ್ ಮಂಗಳೂರು ದಕ್ಷಿಣ, ಮಂಜುಳಾ ಮಂಗಳೂರು ಉತ್ತರ, ಆಶಾ ಮೂಡುಬಿದ್ರೆ, ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ , ಸಂಪನ್ಮೂಲ ವ್ಯಕ್ತಿ ಅಶೋಕ್ ಕಾಮತ್ , ಡಿಡಿಪಿಐ ಕಚೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಆರ್‌ಎಂಎಸ್ಎ ಉಪ ಯೋಜನಾಧಿಕಾರಿ ಗೀತಾ , ಫಿಲೋಮಿನಾ ಫ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೋಡ್ರಿಗಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT