ಭಾನುವಾರ, ಸೆಪ್ಟೆಂಬರ್ 15, 2019
30 °C
ಕೇರಳದ ಮಠದ ವ್ಯಾಜ್ಯ ಇತ್ಯರ್ಥಕ್ಕೂ ಕೈಹಾಕಿದ್ದ ಆರೋಪಿ

ಸ್ಮಗ್ಲರ್‌ ಹಣ ವಸೂಲಿಗೆ ಬಂದಿದ್ದ ಪೀಟರ್‌!

Published:
Updated:

ಮಂಗಳೂರು: ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯೊಂದರ ನಿರ್ದೇಶಕ ಎಂದು ಬಿಂಬಿಸಿಕೊಂಡು ಜನರನ್ನು ವಂಚಿಸುತ್ತಿದ್ದ ಸ್ಯಾಮ್‌ ಪೀಟರ್‌ ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಕುಖ್ಯಾತ ಕ್ರಿಮಿನಲ್‌ ಒಬ್ಬ ಮಧ್ಯವರ್ತಿಗಳಿಗೆ ನೀಡಿದ್ದ ಹಣ ವಸೂಲಿಗೆ ಬಂದಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇದೇ ವೇಳೆ ಕೇರಳದ ಮಠವೊಂದರ ವ್ಯಾಜ್ಯ ಇತ್ಯರ್ಥಕ್ಕೂ ಕೈಹಾಕಿದ್ದ ಎಂಬ ಸಂಗತಿ ತನಿಖೆ ವೇಳೆ ಬಯಲಿಗೆ ಬಂದಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಡಾ.‍ಪಿ.ಎಸ್‌.ಹರ್ಷ, ‘ದುಬೈ ಶರೀಫ್‌ ಎಂಬ ಚಿನ್ನ ಕಳ್ಳಸಾಗಣೆದಾರನ ₹ 12 ಕೋಟಿ ಮೌಲ್ಯದ ಚಿನ್ನವನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಿಸದೇ ಚಿನ್ನವನ್ನು ಬಿಡಿಸಿಕೊಡಲು ಶರೀಫ್‌ ಬೆಂಗಳೂರಿನ ಮುಜಾಫರ್‌ ಎಂಬ ವಕೀಲನ ಸಲಹೆಯಂತೆ ಮಂಗಳೂರಿನ ಗಿರೀಶ್‌ ರೈ ಮತ್ತು ಇಮ್ತಿಯಾಝ್‌ ಎಂಬುವವರಿಗೆ ನೀಡಿದ್ದ. ಆದರೆ, ಅವರಿಂದ ಆ ಕೆಲಸ ಸಾಧ್ಯವಾಗಿರಲಿಲ್ಲ. ಅವರಿಗೆ ನೀಡಿದ್ದ ಹಣವನ್ನು ವಸೂಲಿ ಮಾಡಲು ಸ್ಯಾಮ್‌ ಪೀಟರ್‌ನನ್ನು ನಿಯೋಜಿಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ’ ಎಂದರು.

ಹಣ ವಸೂಲಿಗೆ ಪೀಟರ್‌ಗೆ ನೆರವು ನೀಡುವಂತೆ ಜಿ.ಮೊಯಿದ್ದೀನ್‌ ಅಲಿಯಾಸ್‌ ಚೆರಿಯನ್‌ ಮತ್ತು ಹೋಟೆಲ್ ಉದ್ಯಮಿ ಎಸ್‌.ಎ.ಕೆ.ಅಬ್ದುಲ್‌ ಲತೀಫ್‌ಗೆ ಮುಜಾಫರ್‌ ಸೂಚಿಸಿದ್ದ. ಅದರಂತೆ ಅವರಿಬ್ಬರೂ ಸ್ಯಾಮ್‌ ಪೀಟರ್‌ ಜೊತೆಗಿದ್ದರು ಎಂಬುದು ಗೊತ್ತಾಗಿದೆ. ಕಸ್ಟಮ್ಸ್‌ ಅಧಿಕಾರಿಗಳಿಂದ ಪ್ರಕರಣದ ಕುರಿತು ಮಾಹಿತಿ ಕೋರಲಾಗಿದೆ. ವಕೀಲನ ವಿಚಾರಣೆಗೂ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಮಠದ ವ್ಯಾಜ್ಯಕ್ಕೂ ಕೈ

‘ಮಠವೊಂದರ ಸ್ವಾಮೀಜಿಗಳ ನಡುವಿನ ವ್ಯಾಜ್ಯ ಇತ್ಯರ್ಥ ಮಾಡಿಕೊಡುವಂತೆ ಉಡುಪಿಯ ರಾಮಚಂದ್ರ ನಾಯಕ್‌ ಎಂಬಾತ ಸ್ಯಾಮ್‌ ಪೀಟರ್‌ನನ್ನು ಸಂಪರ್ಕಿಸಿದ್ದ. ಒಬ್ಬ ಸ್ವಾಮೀಜಿ ಆರೋಪಿಗೆ ಕೆಲವು ದಾಖಲೆಗಳನ್ನು ನೀಡಿದ್ದರು. ಈ ಬಗ್ಗೆ ರಾಮಚಂದ್ರ ನಾಯಕ್‌ ಎಂಬಾತನ ವಿಚಾರಣೆ ನಡೆಸಲಾಗಿದೆ’ ಎಂದರು.

ವ್ಯಾಜ್ಯ ಇತ್ಯರ್ಥಕ್ಕೆ ಪೀಟರ್‌ನನ್ನು ಸಂಪರ್ಕಿಸಿದ್ದ ಸ್ವಾಮೀಜಿಯ ಹೆಸರನ್ನು ಕಮಿಷನರ್‌ ಬಹಿರಂಗಪಡಿಸಲಿಲ್ಲ. ಆದರೆ, ಗೌಡ ಸಾರಸ್ವತ ಬ್ರಾಹ್ಮಣರ ಕಾಶಿ ಸಂಸ್ಥಾನ ಮಠದ ಹಿಂದಿನ ಸ್ವಾಮೀಜಿಯ ಶಿಷ್ಯರಾಗಿದ್ದು ಮಠದಿಂದ ಹೊರಬಿದ್ದಿರುವ ರಾಘವೇಂದ್ರ ತೀರ್ಥ ಸ್ವಾಮಿ ಅವರು ಈಗಿನ ಸಂಯಮೀಂದ್ರ ತೀರ್ಥ ಸ್ವಾಮೀಜಿ ವಿರುದ್ಧದ ವ್ಯಾಜ್ಯ ಇತ್ಯರ್ಥಕ್ಕೆ ಆರೋಪಿಯನ್ನು ಸಂಪರ್ಕಿಸಿದ್ದರು ಎಂಬ ಮಾಹಿತಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿದೆ.

Post Comments (+)