ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು, ದರೋಡೆ: 9 ಮಂದಿಯ ಬಂಧನ

ಮೂಡುಬಿದಿರೆ, ಮುಲ್ಕಿ, ಬಜ್ಪೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು
Last Updated 3 ಏಪ್ರಿಲ್ 2021, 12:26 IST
ಅಕ್ಷರ ಗಾತ್ರ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮನೆಗಳಲ್ಲಿ ಕಳವು, ದರೋಡೆ, ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್‌ ಕಮಿಷನರ್ ಶಶಿಕುಮಾರ್ ಎನ್‌., ‘ಕಮಿಷನರೇಟ್ ವ್ಯಾಪ್ತಿಯ ಮೂಡುಬಿದಿರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣೆಗಳ ವ್ಯಾಪ್ತಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ’ ಎಂದರು.

‘ಮಂಗಳೂರು ನಗರ ಪೊಲೀಸ್‌ ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಹಾಗೂ ತಂಡವು ಏಪ್ರಿಲ್ 1ರಂದು ಅಬ್ದುಲ್ ರವೂಫ್, ರಾಮಮೂರ್ತಿ ಎಂಬವರನ್ನು ಬಂಧಿಸಿದ್ದರು. ಏ.2ರಂದು ಅಶ್ರಫ್ ಪೆರಾಡಿ, ಸಂತೋಷ್ , ನವೀದ್ , ರಮಾನಂದ ಎನ್. ಶೆಟ್ಟಿ, ಸುಮನ್, ಸಿದ್ದಿಕ್, ಅಲಿಕೋಯ ಎಂಬವರನ್ನು ಬಂಧಿಸಲಾಗಿದೆ’ ಎಂದರು.

ಬಂಧಿತರಿಂದ ಇನ್ನೋವಾ ಕಾರು, ಟಾಟಾ ಜೆಸ್ಟ್ ಕಾರು, ಮಾರುತಿ ಕಾರು, ಆಟೊರಿಕ್ಷಾ, 11 ಮೊಬೈಲ್‌ಗಳು, 4 ದ್ವಿಚಕ್ರ ವಾಹನ, ಏರ್‌ಗನ್, ಚಿನ್ನದಂತಿರುವ ಒಡವೆಗಳು ಸೇರಿದಂತೆ ಒಟ್ಟು ₹32.22 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿದ್ದ 2 ತಲವಾರು, ಕಬ್ಬಿಣದ ಸಲಾಕೆ, ಉದ್ದನೆಯ ಚಾಕು, ಖಾರದ ಹುಡಿ, ಮರದ ದೊಣ್ಣೆಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಉಪ್ಪಿನಂಗಡಿ, ಕೊಕ್ಕಡ, ಮೂಡುಬಿದಿರೆಯಲ್ಲಿ ದರೋಡೆಗಳು, ಹಾಸನದ ಅರೆಹಳ್ಳಿ, ಬೆಳ್ತಂಗಡಿಯ ಪುಂಜಾಲಕಟ್ಟೆಗಳಲ್ಲಿ ಕಳವು ಪ್ರಕರಣಗಳ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ವಿಜಯನಗರ, ಮೂಡುಬಿದಿರೆ, ಮುಲ್ಕಿ, ಬಜ್ಪೆಗಳಲ್ಲಿ ಮಾರ್ಚ್ 27ರಿಂದ 31ವರೆಗೆ ನಡೆದ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.

ಇನ್ನೂ 15 ಆರೋಪಿಗಳು ಭಾಗಿಯಾಗಿರುವ ಮಾಹಿತಿ ಇದೆ. ಕೃತ್ಯ ಎಸಗಲು ವಾಹನ ನೀಡಿದವರು, ಹಣಕಾಸಿನ ನೆರವು ನೀಡಿದವರು, ಸಂಚು ರೂಪಿಸಿದವರು, ಆಶ್ರಯ ನೀಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ಕಾಫಿ ತೋಟ, ಅಡಿಕೆ ಗೋದಾಮುಗಳ ಮಾಹಿತಿಯನ್ನು ಕಲೆಹಾಕಿ, ದರೋಡೆ ನಡೆಸುತ್ತಿದ್ದರು. ಷೋಕಿ ಜೀವನದ ಜೊತೆಗೆ ಗಾಂಜಾ ವ್ಯಸನಿಗಳು ಆಗಿದ್ದರು. ಈ ಹಿಂದೆ ಸಣ್ಣಪುಟ್ಟ ಪ್ರಕರಣಗಳಲ್ಲಿ ಬಂಧಿತರಾಗಿದ್ದ ವೇಳೆ ಜೈಲಿನಲ್ಲಿ ಪರಸ್ಪರ ಪರಿಚಿತಗೊಂಡು ಗ್ಯಾಂಗ್ ರೂಪಿಸಿಕೊಂಡಿದ್ದರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ಮಹೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT