ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡ್ಡಲಕಾಡು ಸರ್ಕಾರಿ ಶಾಲೆ: ಸರ್ಕಾರದ ಹಂಗಿಲ್ಲದೆ ₹4 ಕೋಟಿ ಕಟ್ಟಡ ನಿರ್ಮಾಣ

ದಡ್ಡಲಕಾಡು ಸರ್ಕಾರಿ ಶಾಲೆ ಕಟ್ಟಡ ಲೋಕಾರ್ಪಣೆ 7ರಂದು
Last Updated 5 ಮೇ 2022, 7:38 IST
ಅಕ್ಷರ ಗಾತ್ರ

ಮಂಗಳೂರು: ಈ ಸರ್ಕಾರಿ ಶಾಲೆ ಏಳು ವರ್ಷಗಳ ಹಿಂದೆ ಮಕ್ಕಳ ಕೊರತೆಯಿಂದ ಮುಚ್ಚುವ ಹಂತ ತಲುಪಿತ್ತು. ಸ್ಥಳೀಯ ಸಂಘಟನೆಯೊಂದು ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಯ ಚರಿತ್ರೆಯನ್ನೇ ಬದಲಿಸಿದೆ. ಸರ್ಕಾರದ ಅನುದಾನವಿಲ್ಲದೆ ಹಂತಹಂತವಾಗಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ, ಬಸ್‌ ಸೌಲಭ್ಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿದೆ. ಅದರ ಫಲವಾಗಿ ಶಾಲೆಯಲ್ಲಿ ಇಂದು ಮಕ್ಕಳ ಸಂಖ್ಯೆ 1,200 ತಲುಪಿದೆ.

ಇದು ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಶಾಲೆಯ ಯಶೋಗಾಥೆ. 2015–16ನೇ ಸಾಲಿನಲ್ಲಿ ಕೇವಲ 28 ಮಕ್ಕಳಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ್‌ ಅಂಚನ್‌ ನೇತೃತ್ವದ ಶ್ರೀದುರ್ಗಾ ದುರ್ಗಾ ಚಾರಿಟಬಲ್‌ ಟ್ರಸ್ಟ್‌ ದತ್ತು ಪಡೆದು ಶಾಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಿತ್ತು.

ಮೊದಲ ಹಂತದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಶಾಲೆಗೆ ಹೈಟೆಕ್‌ ಶೌಚಾಲಯ ಸೇರಿದಂತೆ 8 ಕೊಠಡಿಯ ಕಟ್ಟಡವನ್ನು ನಿರ್ಮಿಸಿ, ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರ ಮೂಲಕ ಲೋಕಾರ್ಪಣೆ ಮಾಡಿಸಲಾಗಿತ್ತು. ಎರಡನೇ ಹಂತದಲ್ಲಿ ₹1 ಕೋಟಿ ವೆಚ್ಚದಲ್ಲಿ ಮೊದಲ ಮಹಡಿಯಲ್ಲಿ 8 ಕೊಠಡಿಯನ್ನು ನಿರ್ಮಿಸಿ, ಅದನ್ನು ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಉದ್ಘಾಟಿಸಿದ್ದರು.

ಮೇ 7ರಂದು ಲೋಕಾರ್ಪಣೆ: ಮೂರನೇ ಹಂತದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 12 ಕೊಠಡಿ ಮತ್ತು ಸಭಾಂಗಣವನ್ನು ಒಳಗೊಂಡ ಎರಡನೇ ಮಹಡಿ ಉದ್ಘಾಟನೆಗೆ ಸಿದ್ಧವಾಗಿದ್ದು, ಮೇ 7ರಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೋಕಾರ್ಪಣೆ ಮಾಡುವರು. ಶಾಲೆಯ ಕಟ್ಟಡಕ್ಕೆ ಸರ್ಕಾರದ ಯಾವುದೇ ಅನುದಾನ ಪಡೆಯದೆ, ದಾನಿಗಳ, ಪೋಷಕರ ನೆರವು ಹಾಗೂ ವಿವಿಧ ಕೈಗಾರಿಕೆಗಳ ಸಿಎಸ್‌ಆರ್‌ ನಿಧಿಯನ್ನು ಬಳಸಿರುವುದು ವಿಶೇಷ. ಶಾಸಕ ರಾಜೇಶ್‌ ನಾಯ್ಕ್‌ ಅನುದಾನದಿಂದ ಶಾಲೆಗೆ ಕಾಂಪೌಂಡ್‌ ಮತ್ತು ಮೈದಾನಕ್ಕೆ ಇಂಟರ್‌ಲಾಕ್‌ ಅಳವಡಿಕೆ ಮಾಡಲಾಗಿದೆ.

‘ಖಾಸಗಿ ಶಾಲೆಯಂತೆ ಸರ್ಕಾರಿ ಶಾಲೆಗಳಲ್ಲೂ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ, ಬಸ್‌ ವ್ಯವಸ್ಥೆ, ಗುಣಮಟ್ಟದ ಶಿಕ್ಷಣ, ಕನ್ನಡದ ಜತೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡಿದರೆ ಮಕ್ಕಳು ಸಂಖ್ಯೆ ಹೆಚ್ಚಿಸಬಹುದು ಎಂಬುದಕ್ಕೆ ದಡ್ಡಲಕಾಡು ಶಾಲೆಯೇ ಉದಾಹರಣೆ. ಪಠ್ಯ ಶಿಕ್ಷಣದ ಜತೆಗೆ ಯೋಗ, ಸಂಗೀತ, ನೃತ್ಯ, ಕೃಷಿ, ಕರಾಟೆ, ಕ್ರೀಡೆ ಎಲ್ಲದಕ್ಕೂ ಆದ್ಯತೆ ನೀಡಿದ್ದೇವೆ. ಪೋಷಕರ ಒತ್ತಡದ ಮೇರೆಗೆ ಎರಡು ವರ್ಷಗಳ ಹಿಂದೆ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ’ ಎನ್ನುತ್ತಾರೆ ಸರ್ಕಾರಿ ಶಾಲೆ ಉಳಿಸಿ–ಬೆಳೆಸಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌.

‘ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಯ ದಾಖಲಾತಿಗಾಗಿ ಈಗಾಗಲೇ 350ಕ್ಕೂ ಅಧಿಕ ಅರ್ಜಿಗಳನ್ನು ಪೋಷಕರು ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ 100 ವಿದ್ಯಾರ್ಥಿಗಳನ್ನು 1ನೇ ತರಗತಿಗೆ ದಾಖಲಾತಿ ಮಾಡಲಾಗಿದೆ. 1ರಿಂದ 4ನೇ ತರಗತಿ ವರೆಗೆ ಎ, ಬಿ, ಸಿ ವಿಭಾಗಗಳಿದ್ದು, ಪ್ರತಿ ಕೊಠಡಿಯಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶವಿದೆ. 1ನೇ ತರಗತಿಯಲ್ಲಿ ಇನ್ನು 20 ಮಕ್ಕಳಿಗೆ ಮಾತ್ರ ಅವಕಾಶವಿದೆ. ಒಂದು ವಾರದಲ್ಲಿ ಅದು ಭರ್ತಿಯಾಗಲಿದೆ’ ಎನ್ನುತ್ತಾರೆ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT