ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯಂಗಡಿ ಗ್ರಾಪಂ ಬರ್ಖಾಸ್ತು

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
Last Updated 16 ಸೆಪ್ಟೆಂಬರ್ 2019, 13:38 IST
ಅಕ್ಷರ ಗಾತ್ರ

ಮಂಗಳೂರು: ತಾಲ್ಲೂಕಿನ ಹಳೆಯಂಗಡಿ ಗ್ರಾಮ ಪಂಚಾಯಿತಿ ಬರ್ಖಾಸ್ತುಗೊಳಿಸುವ ನಿರ್ಣಯವನ್ನು ಸೋಮವಾರ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಅಂಗೀಕರಿಸಿತು.

‘ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ, ಗ್ರಾಮ ಸಭೆಗಳು ನಡೆಯುತ್ತಿಲ್ಲ. ಜನರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರಿಗೂ ಸಹಕಾರ ನೀಡುತ್ತಿಲ್ಲ’ ಎಂದು ಸದಸ್ಯ ವಿನೋದ್‌ಕುಮಾರ್ ಬೆಳ್ಳೂರು ದೂರಿದರು.

‘ಇಲ್ಲಿಗೆ ಅಧಿಕಾರಿಯೊಬ್ಬರನ್ನು ನಿಯೋಜಿಸಿ ವರದಿಯನ್ನು ತರಿಸಿಕೊಳ್ಳಿ. ಆ ಬಳಿಕ ಕ್ರಮ ಕೈಗೊಳ್ಳಿ ’ ಎಂದು ಸದಸ್ಯೆ ಮಮತಾ ಗಟ್ಟಿ ಮನವಿ ಮಾಡಿದರು. ಅವರಿಗೆ ಕಾಂಗ್ರೆಸ್‌ ಸದಸ್ಯರು ದನಿಗೂಡಿಸಿದರು.

ಇದನ್ನು ಖಂಡಿಸಿದ ಬಿಜೆಪಿ ಸದಸ್ಯರು, ‘ಈಗಾಗಲೇ ಅಧಿಕಾರಿಗಳು ವರದಿಗಳನ್ನು ನೀಡಿದ್ದಾರೆ. ಮಂಗಳೂರು ತಾಲ್ಲೂಕು ಪಂಚಾಯಿತಿಯೂ ಈ ಬಗ್ಗೆ ಚರ್ಚಿಸಿ ವರದಿ ನೀಡಿದ್ದು, ಬರ್ಖಾಸ್ತುಗೊಳಿಸಬೇಕು’ ಎಂದು ಪಟ್ಟು ಹಿಡಿದರು.

ಈ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿತು. ಅಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದ ಕಾಂಗ್ರೆಸ್ ಸದಸ್ಯರು, ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್‌ನ ಎಂ.ಎಸ್. ಮಹಮ್ಮದ್‌, ಶಾಹುಲ್, ಧರಣೇಂದ್ರ ಕುಮಾರ್ ಮತ್ತಿತರರು ಇದ್ದರು.

ಅಲ್ಲದೇ, ‘ಬಿಜೆಪಿಗೆ ಧಿಕ್ಕಾರ’ ಎಂದರು. ‘ಕಾಂಗ್ರೆಸ್‌ ಭ್ರಷ್ಟಾಚಾರಿಗಳನ್ನು ಬೆಂಬಲಿಸುತ್ತಿದೆ’ ಎಂದು ಸದಸ್ಯ ತುಂಗಪ್ಪ ಬಂಗೇರ ಆರೋಪಿಸಿದರು. ‘ಇಲ್ಲಿ ಪಕ್ಷಗಳನ್ನು ಎಳೆತರುವುದು ಬೇಡ. ವಿಷಯದ ಬಗ್ಗೆ ಮಾತ್ರ ಚರ್ಚಿಸೋಣ’ ಎಂದು ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಬರ್ಖಾಸ್ತು ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದರು. 21–16 ಮತಗಳಲ್ಲಿ ನಿರ್ಣಯ ಅಂಗೀಕಾರವಾಗಿದೆ ಎಂದು ಘೋಷಿಸಿದರು. ಕಾಂಗ್ರೆಸ್‌ ಸದಸ್ಯರು ಊಟಕ್ಕೂ ಹೋಗದೇ ಧರಣಿ ಮುಂದುವರಿಸಿದರು. ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ ಹಾಗೂ ಅಧಿಕಾರಿಗಳು ಮನವೊಲಿಸಿದ ಬಳಿಕ ಊಟಕ್ಕೆ ತೆರಳಿದರು.

ಇದಕ್ಕೂ ಮೊದಲು ಜಿಲ್ಲೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸಮರ್ಪಕ ನಿರ್ವಹಣೆ ಆಗುತ್ತಿಲ್ಲ ಎಂಬ ಆರೋಪಗಳನ್ನು ಸದಸ್ಯರು ಮಾಡಿದರು. ಹೀಗಾಗಿ, ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆಯನ್ನು ಒಪ್ಪಿಸುವ ಕುರಿತು ಚರ್ಚಿಸಲು ಇದೇ 20ರಂದು ಸಭೆ ನಡೆಸಲು ನಿರ್ಧರಿಸಲಾಯಿತು.

‘ನೆರೆ ಹಾನಿಗೆ ತುತ್ತಾದವರಿಗೆ ಇನ್ನೂ ಸಮರ್ಪಕ ಪರಿಹಾರ ಸಿಕ್ಕಿಲ್ಲ’ ಎಂದು ಸದಸ್ಯ ಮಹಮ್ಮದ್, ಶಾಹುಲ್ ಹಮೀದ್‌, ಮಮತಾ ಗಟ್ಟಿ, ಧರಣೇಂದ್ರ ಕುಮಾರ್ ಆರೋಪಿಸಿದರು.

‘ಸುಳ್ಯದಲ್ಲಿ ಕಳೆದ ವರ್ಷದ ಭೂ ಕುಸಿತ ಮನೆ ಕಳೆದುಕೊಂಡವರಿಗೆ ಇನ್ನೂ ಸಮರ್ಪಕ ಪರಿಹಾರ ಸಿಕ್ಕಿಲ್ಲ’ ಎಂದು ಹರೀಶ್ ಕಂಜಿಪಿಣಿ ಪ್ರತಿಕ್ರಿಯಿಸಿದರೆ, ‘ಈ ವಿಚಾರವನ್ನು ಸಂಬಂಧಿತ ಸಭೆಯಲ್ಲಿ ಮಾತನಾಡೋಣ. ಇಲ್ಲಿ ಬೇಡ’ ಎಂದು ಸುಚರಿತ ಶೆಟ್ಟಿ ಹಾಗೂ ಬಿಜೆಪಿ ಸದಸ್ಯರು ಹೇಳಿದರು.

ಇದನ್ನು ಖಂಡಿಸಿದ ಕಾಂಗ್ರೆಸ್ ಸದಸ್ಯರು, ‘ಅಂದು ಸಿಕ್ಕಿಲ್ಲ, ಹಿಂದೆ ಸಿಕ್ಕಿಲ್ಲ ಎಂದು ಸಬೂಬು ಹೇಳಿಕೊಂಡು, ಈಗಿನ ಸಂತ್ರಸ್ತರಿಗೆ ವಂಚಿಸುವ ಕೆಲಸವನ್ನು ಮಾಡಬಾರದು. ಸಂತ್ರಸ್ತರಿಗೆ ಅಧಿಕ ನೆರವು ದೊರಕಿಸಿಕೊಡಲು ನಾವೆಲ್ಲರೂ ಜೊತೆಯಾಗಿ ಪ್ರಯತ್ನಿಸಬೇಕು’ ಎಂದು ಒತ್ತಾಯಿಸಿದರು.

‘ಕಾಣಿಯೂರು ಹಾಗೂ ಆಸುಪಾಸಿನ ವಿದ್ಯಾರ್ಥಿಗಳು ಬಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯೆ ಪ್ರಮೀಳಾ ಜನಾರ್ದನ ಆಗ್ರಹಿಸಿದರು. ಆಶಾ ತಿಮ್ಮಪ್ಪ ಗೌಡ ಹಾಗೂ ಇತರರು ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT