ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಮತ ಪಡೆದು ಹರೀಶ್ ಜನವಿರೋಧಿ ಕೆಲಸ: ಆರೋಪ

Published 23 ಮೇ 2024, 14:02 IST
Last Updated 23 ಮೇ 2024, 14:02 IST
ಅಕ್ಷರ ಗಾತ್ರ

ಮಂಗಳೂರು: ಕ್ಷೇತ್ರದ ಜನರ ಮತ ಪಡೆದು ಶಾಸಕರಾದ ಹರೀಶ್ ಪೂಂಜ ಈಗ ಜನವಿರೋಧಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೌಡಿ ಶೀಟರ್‌ ಬಂಧನವಾದಾಗ ಅವರನ್ನು ಬಿಡಿಸುವುದಕ್ಕಾಗಿ ಪೊಲೀಸರನ್ನು ನಿಂದಿಸಿರುವ ಹರೀಶ್ ಪೂಂಜ, ಪೊಲೀಸರು ನೋಟಿಸ್ ಕೊಡಲು ಬಂದಾಗ ಪಕ್ಷದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಮನೆಯಲ್ಲಿ ಸೇರಿಸಿ ಸಣ್ಣತನ ಮೆರೆದಿದ್ದಾರೆ’ ಎಂದು ದೂರಿದರು.

‘ಶಾಸಕರು ನೀತಿ ನಿಯಮಗಳನ್ನು ಉಲ್ಲಂಘಿಸಿ ರೌಡಿಯಂತೆ ವರ್ತಿಸಿದ್ದಾರೆ. ಬೆಳ್ತಂಗಡಿ ತಾಲ್ಲೂಕನ್ನು ಪ್ರತಿನಿಧಿಸಿದ ಅನೇಕ ಶಾಸಕರು ಗೌರವದಿಂದ ವರ್ತಿಸಿದ್ದಾರೆ. ಕ್ಷೇತ್ರಕ್ಕೆ ಖ್ಯಾತಿ ತಂದಿದ್ದಾರೆ. ಐದು ಬಾರಿಯ ಶಾಸಕ ವಸಂತ ಬಂಗೇರ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತ ಅಧಿಕಾರಿಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹದ್ದುಬಸ್ತಿನಲ್ಲಿ ಇರಿಸಿಕೊಂಡಿದ್ದರು. ಹರೀಶ್ ಪೂಂಜ ಬಹುಶಃ ವಸಂತ ಬಂಗೇರ ಅವರಂತೆ ಆಗಲು ಪ್ರಯತ್ನಿಸಿ ಮಿತಿಮೀರಿದರು ಎಂದೆನಿಸುತ್ತದೆ’ ಎಂದು ಹರೀಶ ಕುಮಾರ್ ಅಭಿಪ್ರಾಯಪಟ್ಟರು.

‘ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರನ್ನು ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ರಕ್ಷಿಸಲು ಹೋಗಿದ್ದ ಹರೀಶ್ ಪೂಂಜ ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸರ ಜೊತೆ ವಾಗ್ವಾದ ನಡೆಸಿ ಸ್ಟೇಷನ್ ನಿಮ್ಮಪ್ಪಂದಾ ಎಂದು ಕೇಳಿದ್ದಾರೆ. ಸ್ಟೇಷನ್‌ಗೆ ಬೆಂಕಿ ಹಚ್ಚುವ ವಿಷಯ ಮಾತನಾಡಿದ ಅವರು ತಲೆ ಕಡಿಯುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಮಾಡಿದಂತೆ ಮಾಡುವುದಾಗಿ ಹೇಳಿದ್ದರು. ಹಾಗಿದ್ದರೆ ಅಲ್ಲಿ ನಡೆದ ಘಟನೆಗಳಲ್ಲಿ ಪೂಂಜರ ಪಾತ್ರ ಇತ್ತೇ’ ಎಂದು ಹರೀಶ್‌ ಕುಮಾರ್ ಪ್ರಶ್ನಿಸಿದರು.

‘ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಹರೀಶ್ ಪೂಂಜ ಅರಣ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈಗಿನ ಪ್ರಕರಣದಲ್ಲಿ ಪ್ರಚಾರಕ್ಕಾಗಿ ಏನೇನೋ ಮಾಡಿಕೊಂಡು ಪೊಲೀಸರು ಮನೆಗೆ ಬಂದಾಗ ಅವಿತು ಕುಳಿತುಕೊಂಡಿದ್ದಾರೆ. ಪೊಲೀಸರು ಹೋದ ನಂತರ ಹೆದರಿ ಹೋದರು ಎಂದು ಹೇಳಿದ್ದಾರೆ. ಇವೆಲ್ಲ ಬರೀ ಪ್ರಚಾರದ ಗಿಮಿಕ್‌’ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ ಡಿಟೊನೇಟರ್ ಬಳಸಿ ಸ್ಫೋಟ ಮಾಡಿ ಗಣಿಗಾರಿಕೆ ಮಾಡುತ್ತಿದ್ದವರನ್ನು ಬಂಧಿಸಿದ್ದಕ್ಕಾಗಿ ಹರೀಶ್ ಪೂಂಜ ಪ್ರತಿಭಟನೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಅದ ರೀತಿಯ ಅನಾಹುತ ತಡೆಯುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ಮಾಡಿದ್ದಾರೆ ಎಂದರು.

ಮುಖಂಡರಾದ ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೊ, ಸುಭಾಶ್ಚಂದ್ರ ಕೊಳ್ನಾಡ್, ಲಾರೆನ್ಸ್ ಡಿಸೋಜ, ನೀರಜ್ ಪಾಲ್, ಟಿ.ಕೆ ಸುಧೀರ್ ಇದ್ದರು.

ಕಾಗೆ ಮತ್ತು ಹಿಂದೂ ಧರ್ಮ...

‘ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಕ್ಷಿತ್ ಶಿವರಾಂ ಅವರ ಹೆಸರು ಉಲ್ಲೇಖ ಮಾಡಿದ್ದಾರೆ. ಮಲ್ಲೇಶ್ವರಂನಿಂದ ಹಾರಿ ಬಂದ ಕಾಗೆ ಎಂದು ಹೇಳಿದ್ದಾರೆ. ಕಾಗೆಯ ಪ್ರಸ್ತಾಪ ಮಾಡುವ ಮೂಲಕ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ’ ಎಂದು ಮಂಜುನಾಥ ಭಂಡಾರಿ ದೂರಿದರು. ‘ಕಾಗೆಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಪಿತೃ ಕರ್ಮ ಮಾಡುವ ಸಂದರ್ಭದಲ್ಲಿ ಕಾಗೆಯ ಸಾನ್ನಿಧ್ಯ ಬೇಕಾಗುತ್ತದೆ. ಶನಿ ದೇವರನ್ನು ಪೂಜಿಸುವಾಗಲೂ ಕಾಗೆಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುವ ಬಿಜೆಪಿಯವರಿಗೆ ಇದೆಲ್ಲ ಗೊತ್ತಿಲ್ಲವೇ’ ಎಂದು ಮಂಜುನಾಥ್‌ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT