ಫೆ.4ರಿಂದ ಅಳದಂಗಡಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶ: ಶಿಲಾ ವಿಗ್ರಹ ಮೆರವಣಿಗೆ

ಬೆಳ್ತಂಗಡಿ: ನವೀಕರಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿರುವ ಅಳದಂಗಡಿ ಸುಂಕದಕಟ್ಟೆ ಮಹಾಗಣಪತಿ ದೇವಸ್ಥಾನಕ್ಕೆ ಮಹಾಗಣಪತಿಯ ನೂತನ ಶಿಲಾ ವಿಗ್ರಹವನ್ನು ಕಾರ್ಕಳದ ಮೂಕಾಂಬಿಕಾ ಶಿಲ್ಪಕಲಾ ಕೇಂದ್ರದಿಂದ ವಿಶೇಷ ಮೆರವಣಿಗೆಯಲ್ಲಿ ಭಾನುವಾರ ತರಲಾಯಿತು.
ಇಂಧನ ಸಚಿವ ಸುನಿಲ್ ಕುಮಾರ್ ಮೂರ್ತಿಯನ್ನು ಹಸ್ತಾಂತರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಶಿಲ್ಪಿ ಗುಣವಂತ ಭಟ್ ಉಪಸ್ಥಿತಿಯಲ್ಲಿ ದೇವಸ್ಥಾನದ ಅರ್ಚಕ ಪ್ರವೀಣ ಮಯ್ಯ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.
ತಾಲ್ಲೂಕಿನ ಗಡಿ ಗ್ರಾಮವಾಗಿರುವ ನಾರಾವಿಯಲ್ಲಿ ಅಲ್ಲಿನ ಭಕ್ತರು ವಿಗ್ರಹವನ್ನು ಸ್ವಾಗತಿಸಿದರು. ಅಲ್ಲಿಂದ ಡೊಂಕಬೆಟ್ಟಿನ ವೀರಮ್ಮ ಸಂಜೀವ ಸಾಲಿಯಾನ್ ಮತ್ತು ಮಕ್ಕಳು ಸೇವೆಯಾಗಿ ನೀಡಿರುವ ದೇವಾಲಯದ ವಿವಿಧ ದಿಕ್ಕಿನ ಬಾಗಿಲುಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಸುಲ್ಕೇರಿಯ ಮಹಾಮ್ಮಾಯಿ ಗುಡಿಯ ಬಳಿ ಸ್ವಾಗತಿಸಲಾಯಿತು. ಪಿಲ್ಯದ ಮಾರಿಗುಡಿ ಬಳಿ ಸಂಭ್ರಮದ ಪುರಪ್ರವೇಶ ನೆರವೇರಿತು.
ನೂತನ ಮೂರ್ತಿಯನ್ನು ದೇವಾಲಯದ ವಠಾರದಲ್ಲಿ ಜಲಾಧಿವಾಸ ಮಾಡಲಾಯಿತು. ಜ.7ರಂದು ವಿಗ್ರಹದ ಪ್ರತಿಷ್ಠೆ ನೆರವೇರಲಿದ್ದು, ಜ.9ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪದಾಧಿಕಾರಿಗಳಾದ ಶಿವಪ್ರಸಾದ ಅಜಿಲ, ನಿತ್ಯಾನಂದ ಶೆಟ್ಟಿ ನೊಚ್ಚ, ಅನಿಲ್‌ಕುಮಾರ್, ಸದಾನಂದ ಮಾಳಿಗೆ, ಸುರೇಶ್‌ಶೆಟ್ಟಿ, ಸಂತೋಷ್ ಕಾಪಿನಡ್ಕ, ಜಗನ್ನಾಥ ಶೆಟ್ಟಿ, ಸೋಮನಾಥ ಬಂಗೇರ, ವಿಜಯಕುಮಾರ್ ಜೈನ್, ಸದಾನಂದ ನಾವರ, ಮೋಹನದಾಸ, ವೈಶಾಲಿ ಶೆಟ್ಟಿ, ಪ್ರಶಾಂತ ಶೆಟ್ಟಿ, ನವೀನ ಸಾಮನಿ, ಯಶವಂತ್, ಶಿವ ಭಟ್, ವಿಶ್ವನಾಥ ಹೊಳ್ಳ, ನಿರಂಜನ ಜೋಶಿ, ಬೇಬಿ ಪೂಜಾರಿ ಪುಣ್ಕೆತ್ಯಾರು, ಪ್ರಭಾಕರ ಕೊಡಂಗೆ, ಶ್ರೀರಂಗ ಮಯ್ಯ, ಉಮೇಶ್ ಸುವರ್ಣ, ಆನಂದ ನಿರಲ್ಕೆ, ಹರೀಶ್ ಆಚಾರ್ಯ, ಕೃಷ್ಣಪ್ಪ ಬಿಕ್ಕಿರ, ಸತೀಶ್ ದುಗ್ಗಲಚ್ಚಿಲು, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಇದ್ದರು.
ನೂತನ ವಿಗ್ರಹವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ವಿಶೇಷ ಮುತುವರ್ಜಿಯಿಂದ ಮಾಡಿಸಿ, ದೇವಸ್ಥಾನಕ್ಕೆ ಅರ್ಪಿಸಿರುತ್ತಾರೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.