ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ. ಮನ್ನಾ ಜಾಗ ಅತಿಕ್ರಮಿಸಿದರೆ ಕ್ರಮ

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.
Last Updated 30 ಸೆಪ್ಟೆಂಬರ್ 2022, 3:03 IST
ಅಕ್ಷರ ಗಾತ್ರ

ಮಂಗಳೂರು: ಡಿ.ಸಿ ಮನ್ನಾ ಜಾಗವನ್ನು ಅತಿಕ್ರಮಣ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು, ಅದನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಸಿ ಮನ್ನಾ ಜಾಗ ಅತಿಕ್ರಮಣ ಮಾಡುವುದು ಅಥವಾ ಅತಿಕ್ರಮಣ ಮಾಡಿ ಅಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಅದನ್ನು ಸ್ಥಗಿತಗೊಳಿಸಬೇಕು. ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಹಶೀಲ್ದಾರ್ ಸ್ಮಿತಾ ಅವರಿಗೆ ಸೂಚಿಸಿದರು.

ಬಂಟ್ವಾಳ ತಾಲ್ಲೂಕಿನ ಅಲ್ಲಿ ಪಾದೆಯಲ್ಲಿ ಡಿಸಿ ಮನ್ನಾ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ಹಾಗೂ ವಾಮದಪದವಿನಲ್ಲಿ ಅಕ್ರಮವಾಗಿ ಮನೆಯನ್ನು ನಿರ್ಮಿಸಲಾಗಿದೆ ಎಂದು ಸಭೆಯಲ್ಲಿ ಜಿಲ್ಲಾ ದೌರ್ಜನ್ಯ ತಡೆ ಸಮಿತಿಯ ಸದಸ್ಯ ವಿಶ್ವನಾಥ್ ಚಿಂತಿಮಾರ್ ಪ್ರಸ್ತಾಪಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸಂಬಂಧಿಸಿ ವಿವಿಧ ರೀತಿಯ ಸಭೆಗಳನ್ನು ಏರ್ಪಡಿಸುವ ಸರ್ಕಾರದ ಇಲಾಖೆಗಳು ಪೂರ್ವಭಾವಿಯಾಗಿ ಆಯಾ ಸಭೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಸಭೆಗಳಲ್ಲಿ ಚರ್ಚೆಯಾಗುವ ವಿಷಯಸೂಚಿಗಳನ್ನು ಸಂಘಟನೆಗಳು ಹಾಗೂ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಉಪ ನಿರ್ದೇಶಕರು ಸಭೆ ನಡೆಸಬೇಕು ಎಂದು ತಿಳಿಸಿದರು.

ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶನದ ಮಾಹಿತಿ ಒದಗಿಸಬೇಕು. ಪೌರಕಾರ್ಮಿಕರಿಗೆ ಪ್ರತಿ ತಿಂಗಳು 10ರೊಳಗೆ ವೇತನ ಪಾವತಿಸಿ, ಸಂಕಷ್ಟ ಭತ್ಯೆಯನ್ನು ನೀಡುವಂತೆ ಅವರು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಕಾನೂನು ಸುವ್ಯವಸ್ಥೆ ವಿಭಾಗದ ಎಸಿಪಿ ಅಂಶುಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಡಿಎಚ್‌ಒ ಡಾ.ಕಿಶೋರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ ಬೇನಮಟ್ಟಿ, ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿ ರಶ್ಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್, ತಹಶೀಲ್ದಾರ್ ಪುರಂದರ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ರೇಶ್ಮಾ, ಪ್ರಸನ್ನ ದೇರಳಕಾಡು, ಜಿನ್ನಪ್ಪ ನಾಯ್ಕ, ರಮೇಶ್ ಮೂಲ್ಕಿ ಹಾಗೂ ದಯಾನಂದ ಮೂಲ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT