ಕಾಡಾನೆ ಉಪಟಳ ತಡೆಗೆ ಒತ್ತಾಯ

7
ಜಿಲ್ಲಾಧಿಕಾರಿ ಸೆಂಥಿಲ್‌ಗೆ ಸಾರ್ವಜನಿಕರ ಅಹವಾಲು

ಕಾಡಾನೆ ಉಪಟಳ ತಡೆಗೆ ಒತ್ತಾಯ

Published:
Updated:
Deccan Herald

ಸುಳ್ಯ: ನಿರಂತರ ದಾಳಿ ನಡೆಸಿ ಕೃಷಿ ಹಾನಿ ಮಾಡುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ಆಲೆಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಸಾರ್ವಜನಿಕರ ಅಹವಾಲು ಸ್ವೀಕಾರ ನಡೆಸಿದರು.

ಆಲೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಕೃಪಾಶಂಕರ ತುದಿಯಡ್ಕ ನೇತೃತ್ವದಲ್ಲಿ ಸಾರ್ವಜನಿಕರು ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೃಷಿಕರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕಾಡಾನೆಗಳನ್ನು ಸೆರೆ ಹಿಡಿದು ಬೇರೆ ಕಡೆಗೆ ಸಾಗಿಸುವ ಸಾಧ್ಯತೆಯ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಅಶೋಕ್ ನೆಕ್ರಾಜೆ ವಿಷಯ ಪ್ರಸ್ತಾಪಿಸಿ ಈ ಭಾಗದ ಕೃಷಿಕರಿಗೆ ಕೋವಿ ಅತೀ ಅಗತ್ಯ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಒಪ್ಪಿದರೆ ಕೋವಿ ಪರವಾನಗಿ ನವೀಕರಣಕ್ಕೆ ಜಿಲ್ಲಾಡಳಿತ ಸಿದ್ಧವಿದೆ. ಜಿಲ್ಲೆಯಲ್ಲಿ 16 ಸಾವಿರ ಕೋವಿಗಳಿದ್ದು ಚುನಾವಣಾ ಸಂದರ್ಭದಲ್ಲಿ ಇದನ್ನು ಠೇವಣಿ ಪಡೆಯುವುದು ಮತ್ತು ಅದರ ನಿರ್ವಹಣೆ ಸಮಸ್ಯೆಯಾಗಿದೆ ಎಂದರು. ಕೋವಿ ಅತೀ ಅಗತ್ಯ ಇರುವ ಕೃಷಿಕರು ನವೀಕರಣಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಸೂಕ್ತ ದಾಖಲೆಯನ್ನೂ ಹಾಜರುಪಡಿಸಬೇಕು ಎಂದು ಸೂಚಿಸಿದರು.

ಸುಳ್ಯ ಕೊಡಿಯಾಲಬೈಲಿನಲ್ಲಿ ದೇವರಾಜು ಅರಸು ಭವನ ಮತ್ತು ಸುಳ್ಯದ ಅಂಬೇಡ್ಕರ್ ಭವನ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ ಇದಕ್ಕೆ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಚನಿಯ ಕಲ್ತಡ್ಕ ಬೇಡಿಕೆಯಿಟ್ಟರು. ಈ ಕುರಿತು ಗಮನ ಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ಮಂಜೂರಾಗಿದ್ದರೂ ಸ್ಥಳ ಇಲ್ಲದ ಬಗ್ಗೆ ಜಿಲ್ಲಾಧಿಕಾರಿ ಪ್ರಸ್ತಾಪಿಸಿ ಅಂಬೇಡ್ಕರ್ ಭವನ ಮಂಜೂರು ಮಾಡುವ ಮೊದಲು ಸ್ಥಳದ ಲಭ್ಯತೆಯನ್ನು ನೋಡಿಕೊಳ್ಳಬೇಕು ಎಂದರು.

ಮಂಡೆಕೋಲಿನಲ್ಲಿ ಜ್ವರದ ಬಾಧೆಯಿಂದ ಮೃತಪಟ್ಟ ಬಾಲಕನಿಗೆ ರಾಷ್ಟ್ರೀಯ ಭದ್ರತೆಯ ಅನುಸಾರ ಧನಸಹಾಯ ದೊರೆಯುವಂತೆ ಮಾಡಬೇಕು ಎಂದು ಚನಿಯ ಕಲ್ತಡ್ಕ, ಮರ್ಕಂಜದಲ್ಲಿ ಕೊಟ್ಟಿಗೆ ಬಿದ್ದು ಮೃತಪಟ್ಟ ವ್ಯಕ್ತಿಗೆ ಪರಿಹಾರ ನಿಷೇಧ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹರೀಶ್ ಕಂಜಿಪಿಲಿ ಹೇಳಿದರು. ನಿರಾಶ್ರಿತರ ಪುನರ್‌ವಸತಿ ಕೇಂದ್ರ ಸ್ಥಾಪಿಸಲು ಸ್ಥಳ ನೀಡಬೇಕು, 94ಸಿ ಯೋಜನೆಯಡಿಯಲ್ಲಿ ಹಣ ಕಟ್ಟಿದವರಿಗೆ ಹಕ್ಕುಪತ್ರ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಸದಸ್ಯ ಅಶೋಕ್ ನೆಕ್ರಾಜೆ, ನವೀನ್‌ಕುಮಾರ್ ಮೇನಾಲ, ಸುಬೋದ್ ಶೆಟ್ಟಿ ಮೇನಾಲ, ಕುಮಾರಸ್ವಾಮಿ ನಿಯೋಗದಲ್ಲಿದ್ದರು.

ತಹಶೀಲ್ದಾರ್ ಬಿ.ಎಂ.ಕುಂಞಮ್ಮ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !