ಬೆಂಗಳೂರು ಮಾದರಿಯಲ್ಲಿ ಮಂಗಳೂರು ಅಭಿವೃದ್ಧಿ

ಮೂಡುಬಿದಿರೆ: ಬಿಜೆಪಿ ಆಡಳಿತದಲ್ಲಿ ಕೋಮು ದಳ್ಳುರಿಯಿಂದ ನಲುಗು ತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪಿಸಿ ಬೆಂಗಳೂರು ಮಾದರಿಯಂತೆ ಮಾಹಿತಿ ತಂತ್ರಜ್ಞಾನದ ನಗರವನ್ನಾಗಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸಂಕಲ್ಪ ತೊಟ್ಟಿದೆ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಇಲ್ಲಿನ ಸ್ವರ್ಣಮಂದಿರದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಹಮ್ಮಿ ಕೊಂಡಿದ್ದ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು.
ಧರ್ಮದ ಅಮಲು, ಹೆಂಡ, ಹಣದ ಆಮಿಷಕ್ಕೊಳಗಾಗಿ ಬಿಜೆಪಿಗೆ ಮತಕೊಟ್ಟು ನಿಮ್ಮ ಭವಿಷ್ಯ ಹಾಳು ಮಾಡಬೇಡಿ. ಬಿಜೆಪಿಯ ಚಾಕು, ಚೂರಿ ಸಂಸ್ಕೃತಿಯಿಂದ ಪ್ರೇರಣೆಗೊಂಡು ಮಕ್ಕಳಲ್ಲಿ ಭಯೋತ್ಪಾದನೆಯ ಮನಸ್ಥಿತಿ ಸೃಷ್ಟಿಯಾಗುವ ಬದಲು ಅವರ ಕೈಯಲ್ಲಿ ಪೆನ್ನು, ಪೇಪರ್ ಕೊಟ್ಟು ವೈದ್ಯರೋ, ಎಂಜಿನಿಯರೋ ಆಗಿ ದೇಶ ಕಟ್ಟುವ ಪ್ರಜೆಗಳನ್ನಾಗಿಸಿ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಭೂಸುಧಾರಣೆ ಕಾಯ್ದೆಯಿಂದ ಜಿಲ್ಲೆಯ 4.30 ಲಕ್ಷ ಜನ ಪ್ರಯೋಜನ ಪಡೆದು ಹೊಲದೊಡೆಯರಾದರು. ಆದರೆ ಮೋದಿ ಸರ್ಕಾರ ಬಂದ ನಂತರ ಕಾಯ್ದೆಗೆ ತಿದ್ದುಪಡಿ ಮಾಡಿ ಉಳ್ಳವನನ್ನು ಹೊಲದೊಡೆಯನನ್ನಾಗಿ ಮಾಡಿ ಶ್ರೀಮಂತರನ್ನು ಮೇಲೆತ್ತುವ ಕಾರ್ಯ ಆಗುತ್ತಿದೆ ಎಂದು ಹರಿಪ್ರಸಾದ್ ದೂರಿದರು.
ಪಕ್ಷದ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ ಕರಾವಳಿ ಭಾಗದಲ್ಲಿ ಭಾವನಾತ್ಮಕವಾಗಿ ಜನರನ್ನು ವಿಭಜಿಸಿ ಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಬಿಜೆಪಿಯ ಬಾಲ ಕತ್ತರಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಈ ಬದಲಾವಣೆಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಕೇರಳ ಶಾಸಕ ರೋಹಿ ಜಾನ್ಸ್, ಶಾಸಕರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್‌ಗಳಾದ ಮಮತಾ ಗಟ್ಟಿ, ಕವಿತಾ ಸನಿಲ್, ಮಹಿಳಾ ಕಾಂಗ್ರೆಸ್ ನಾಯಕಿ ಅಪ್ಪಿ, ಸುಪ್ರಿಯಾ ಡಿ.ಶೆಟ್ಟಿ, ಮುಖಂಡರಾದ ರಾಜ ಶೇಖರ್ ಕೋಟ್ಯಾನ್, ಮಿಥುನ್ ರೈ, ಚಂದ್ರಹಾಸ್ ಸನಿಲ್, ರಾಜೇಶ್ ಕಡಲಕೆರೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.