ಬುಧವಾರ, ಮೇ 18, 2022
23 °C

ಉಡುಪಿ: ಜೋಡಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು, ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಹಿರಿಯಡ್ಕ ಠಾಣಾ ವ್ಯಾಪ್ತಿಯ ಅತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿ ಹರೀಶ್ ಎಂಬಾತನನ್ನು ಬಂಧಿಸಿದ್ದಾರೆ.

ಮೇ 8ರಂದು ಚೆಲುವಿ (28) ಹಾಗೂ 10 ವರ್ಷದ ಪುತ್ರಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿತ್ತು. ಮೃತಳ ತಂಗಿ ದೇವಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ 48 ಗಂಟೆಯೊಳಗೆ ಪೊಲೀಸರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ (29) ಎಂಬಾತನನ್ನು ಬಂಧಿಸಿದ್ದಾರೆ.

ಕೊಲೆಗೆ ಕಾರಣ: ಆರೋಪಿ ಹರೀಶ್‌ ಕೊಲೆಯಾದ ಚೆಲುವಿಯ ದೂರದ ಸಂಬಂಧಿ. ಗಂಡನಿಂದ ದೂರವಾಗಿದ್ದ ಚೆಲುವಿಯನ್ನು ಮದುವೆಯಾಗುವಂತೆ ಹರೀಶ್ ನಿರಂತರವಾಗಿ ಒತ್ತಾಯಿಸುತ್ತಿದ್ದ. ಮೇ 8ರಂದು ಚೆಲುವಿ ಬೇರೆಯವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವಾಗ ತಗಾದೆ ತೆಗೆದು ಶಾಲಿನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಬಳಿಕ ಚೆಲುವಿಯ ಪುತ್ರಿ ಸಾಕ್ಷ್ಯ ಹೇಳಬಹುದು ಎಂದು ಆಕೆಯನ್ನೂ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಎಂದು ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ ಪ್ರಕರಣದ ವಿವರ ನೀಡಿದರು.

ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ₹ 50,000 ಮೌಲ್ಯದ ಚಿನ್ನದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಆರೋಪಿ ಪರಾರಿಯಾಗಿದ್ದ ಎಂದು ತಿಳಿಸಿದರು.

ಆರೋಪಿಯ ಪತ್ತೆಗೆ ತನಿಖಾಧಿಕಾರಿ ಬ್ರಹ್ಮಾವರ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದಲ್ಲಿ ಪಿಎಸ್‌ಐ ಅನಿಲ್ ಬಿ.ಮಾದರ, ಬಿ.ಇ.ಮಧು, ಪ್ರೊಬೆಷನರಿ ಪಿಎಸ್‌ಐ ಮಂಜುನಾಥ ಮರಬದ ಹಾಗೂ ರವಿ ಬಿ,ಕಾರಗಿ ಹಾಗೂ ಸಿಬ್ಬಂದಿ ರಾಘವೇಂದ್ರ, ನಿತಿನ್‌ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು