ಶುಕ್ರವಾರ, ಮಾರ್ಚ್ 31, 2023
26 °C
ಗೂಂಡಾ ಕಾಯ್ದೆ, ಗಡಿಪಾರು, ಮುಟ್ಟುಗೋಲಿನ ಎಚ್ಚರಿಕೆ

ಡ್ರಗ್ಸ್‌: ಆರೋಪಿಗಳಲ್ಲಿ 6 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆರು ವಿದ್ಯಾರ್ಥಿಗಳು ಸೇರಿದಂತೆ, ಒಟ್ಟು 90 ಮಂದಿ ಮಾದಕ ದ್ರವ್ಯ ಸಾಗಾಟ ಮತ್ತು ವ್ಯಸನ ಪ್ರಕರಣಗಳ ಆರೋಪಿಗಳ ಪರೇಡ್‌ ಸೋಮವಾರ ನಗರದಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.

‘ಡ್ರಗ್ಸ್‌ ದಂಧೆಯನ್ನು ಪುನರಾವರ್ತಿಸಿದರೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲು, ಗಡಿಪಾರು ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಕಮಿಷನರ್ ವಿಕಾಸ್ ಕುಮಾರ್‌ ವಿಕಾಶ್ ಆರೋಪಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿನ ಠಾಣೆಗಳಲ್ಲಿ 180 ಆರೋಪಿಗಳ ವಿರುದ್ಧ ಪ್ರಕರಣಗಳಿದ್ದು, 90 ಮಂದಿ ಹಾಜರಾಗಿದ್ದರು.  

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಮಿಷನರ್‌, ‘ಡ್ರಗ್ಸ್‌ ದಂಧೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿದೆ. ಯುವಜನತೆಯನ್ನು ಈ ಪಿಡುಗಿನಿಂದ ಹೊರತರುವುದೇ ನಮ್ಮ ಉದ್ದೇಶ. ಅದಕ್ಕಾಗಿ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು. 

ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಗೋವಾ ಮತ್ತಿತರ ಕಡೆಗಳಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದ್ದು, ವಿದೇಶ
ದಿಂದಲೂ ರವಾನೆ ಆಗುತ್ತಿದೆ ಎಂಬ ದೂರುಗಳನ್ನು ಅಲ್ಲಗಳೆಯಲಾಗದು. ಮಂಗಳೂರಿನಲ್ಲಿರುವ ವೃತ್ತಿಪರ ಕಾಲೇಜುಗಳಿಗೆ ಹೊರಗಿನಿಂದ ಕಲಿಯಲು ಬರುವ ವಿದ್ಯಾರ್ಥಿಗಳೇ ಈ ದಂಧೆಯ ಟಾರ್ಗೆಟ್‌. ಈ ದಂಧೆ ಗುಪ್ತವಾಗಿ ನಡೆಯುವ ಕಾರಣ, ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ’ ಎಂದು ವಿವರಿಸಿದರು.

ಸ್ಯಾಂಡಲ್‌ವುಡ್ ಡ್ರಗ್ಸ್‌ ಜಾಲಕ್ಕೂ ಮಂಗಳೂರಿಗೂ ನಂಟು ಇದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷ
ನರ್,  ‘ತನಿಖೆ ಪ್ರಗತಿಯಲ್ಲಿರುವ ಕಾರಣ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಚುಟುಕಾಗಿ ಉತ್ತರಿಸಿದರು.

ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಿಸಿಬಿ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ ಪರೇಡ್ ನಡೆಸಿ, ಎಚ್ಚರಿಕೆ ನೀಡಿದರು. ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆರೋಪಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು