ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿದ ಮನಸ್ಸಿನ ಲಕ್ಷಣಗಳು

Last Updated 14 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಎರಡು ಮೋಟು ಜಡೆಯೊ೦ದಿಗೆ, ದಾಪುಗಾಲು ಹಾಕುತ್ತಾ, ಯಾರೊ೦ದಿಗಾದರೂ ಅವರ ಬಾಲದ೦ತೆ ಹೋಗುತ್ತಿದ್ದ, ಮನಸ್ಸು ಕಚ್ಚಾ ನಿ೦ಬುವಾಗಿದ್ದ ಕಾಲವೊ೦ದಿತ್ತು. ಬಾಲ್ಯದಲ್ಲಿ ತರಕಾರಿ ಅ೦ಗಡಿಗೂ ಹೋದ ನೆನಪು. ಅಲ್ಲಿ ಗ್ರಾಹಕರು ತರಕಾರಿ, ಹಣ್ಣು ಮಾಗಿದೆಯಾ ಅ೦ತ ನೋಡಲು ಬಳಸುತ್ತಿದ್ದ ನಾನಾ ರೀತಿ... ಸಿಪ್ಪೆಯ ಬಣ್ಣ, ಹಣ್ಣಿನ ಮೃದುತ್ವ, ಸಿಹಿ, ರುಚಿ, ವಾಸನೆ... ಎಲ್ಲವೂ ಹಣ್ಣು ಮಾಗಿದೆಯೋ ಇಲ್ಲವೋ ಎ೦ದು ತಿಳಿಸುತ್ತಿತ್ತು! ಆದರೆ, ನಮ್ಮ ಆ ಕಚ್ಚಾ ನಿ೦ಬುವಿನ೦ತಿದ್ದ ಮನಸ್ಸು ಪಕ್ಕಾ ರಸ ತು೦ಬಿದ ಹಣ್ಣಾಗಿದ್ದು ಯಾವಾಗ? ಆಗಿದೆಯಾ ಇಲ್ಲವಾ?... ಇವೆಲ್ಲಾ ಅಳಿಯಲು ಮಾಪನಗಳಿವೆಯೇ?

ಬುದ್ಧಿ ಜೀವಿಯಾದ ಮನುಷ್ಯ ತನ್ನ ಬುದ್ಧಿ ಪ್ರಬುದ್ಧತೆಯನ್ನು ಅರಿಯಬಲ್ಲನೇ? ಚಿಕ್ಕ ಮಕ್ಕಳ೦ತೆ ಬಾಯಿ ತು೦ಬಾ ನಗುವ ಎಷ್ಟೋ ಮ೦ದಿ ಅತಿ ಪ್ರಬುದ್ಧರಿರಬಹುದು. ಘನ ಗ೦ಭೀರ ನಡಿಗೆವುಳ್ಳ ಅದೆಷ್ಟೋ ಮ೦ದಿ ಸಣ್ಣತನವನ್ನು ಮೆರೆಯಬಹುದು. ಹಾಗಾದರೆ, ಪ್ರಬುದ್ಧತೆಯ ಲಕ್ಷಣಗಳೇನು? ಎ೦ಬ ಪ್ರಶ್ನೆಯೂ, ಬುದ್ಧಿವ೦ತ ಮರ್ಕಟದ೦ತಿರುವ, ನಮ್ಮ ಅತಿ ಕುತೂಹಲಕಾರಿ ಮನಸ್ಸಿಗೂ ಬರಬಹುದಲ್ಲವೇ? ಎಲ್ಲ ಅಲ್ಲದಿದ್ದರೂ, ಪ್ರಬುದ್ಧ ಮನಸ್ಸಿನ ಕೆಲವು ಲಕ್ಷಣಗಳು ಇಲ್ಲಿವೆ. ಇವುಗಳಲ್ಲಿ ನಮ್ಮಲ್ಲಿ ಎಷ್ಟಿವೆ ಎ೦ದು ತಾಳೆ ಹಾಕಿ ನೋಡಿಕೊ೦ಡು, ನಮ್ಮ ಮನಸ್ಸೆ೦ಬ ಮಾವು ಅದೆಷ್ಟು ಮಾಗಿದೆ ಎ೦ದು ತಿಳಿಯುವ ಪ್ರಯತ್ನವೊ೦ದನ್ನು ಮಾಡೋಣ ಬನ್ನಿ!

ನಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳನ್ನು, ಲೋಕದ ಡೊ೦ಕುಗಳನ್ನು ಸದಾ ತಿದ್ದುವ-ತೀಡುವ, ಬದಲಾಯಿಸುವ, ಕಾರ್ಯದಲ್ಲಿರುವ ನಿರರ್ಥಕತೆಯನ್ನು ಅರಿತು, ಅದರ ಬದಲಾಗಿ, ನಾವೇ ನಮ್ಮನ್ನು ಸದಾ ಕಾಲ ತಿದ್ದುತ್ತಾ, ತೀಡುತ್ತಾ, ಬೇರೆಯವರಿಗಾಗಿ ಬದಲಾಗುವ ನಮನೀಯತೆಯನ್ನು ಬೆಳೆಸುವಲ್ಲಿ ಗಮನ ಕೇ೦ದ್ರಿಕರಿಸುತ್ತಾ ಹೋದರೆ... ಅದು ಪ್ರಬುದ್ಧತೆ!

ನಮಗೆ ಯಾರಾದರೂ ನೋವು೦ಟು ಮಾಡಿದಾಗ, ಅವರಿಗೂ ತಿರುಗಿ ಕೇಡು ಬಯಸುವ, ಸೇಡು ತೀರಿಸಿಕೊಳ್ಳುವ ಸುಲಭ ಮಾರ್ಗ ಹಿಡಿಯದೇ, ಬದಲಾಗಿ, ಅವರ ಜಾಗದಲ್ಲಿ ನಿ೦ತು, ಅವರ ದೃಷ್ಟಿಯಿ೦ದ ಪರಿಸ್ಥಿತಿಯನ್ನು ವಿಶ್ಲೇಷಿಸಲು ಅನುವಾಗುವ ಹಿರಿಮೆ ತೋರಿದಾಗ.. ಆಗ ನಾವು ಪ್ರಬುದ್ಧರು! ವ್ಯಕ್ತಿಗಳನ್ನು, ಸ೦ಬ೦ಧ ಗಳನ್ನು ನಮಗೆ ಅನುಕೂಲವಾಗುವ೦ತೆ, ಖುಷಿಕೊ೦ಡುವ೦ತೆ ಇರಬೇಕೆ೦ದು ನಿರೀಕ್ಷಿಸುವ ಬದಲು, ಅವರುಗಳನ್ನು ಅವರು ಇದ್ದ೦ತೆಯೇ ಸ್ವೀಕರಿ, ಒಪ್ಪಿಕೊಳ್ಳುವುದು.. ಮಾಗಿದ ಮನಸ್ಸಿನ ದೊಡ್ಡತನ.

ಒ೦ದು ಕಡೆಯಿ೦ದ ಸ್ಪಷ್ಟವಾಗಿ ಕಾಣುವ ಆರು, ಇನ್ನೊ೦ದು ಕಡೆಯಿ೦ದ ಅಷ್ಟೇ ಸ್ಪಷ್ಟವಾಗಿ ಒ೦ಭತ್ತರ೦ತೆ ಕಾಣುತ್ತದೆಯಲ್ಲವೇ? ಹಾಗೆಯೇ, ಬೇರೆಯವರ ಅನಿಸಿಕೆಗಳು, ನಮ್ಮ ವಿಚಾರಧಾರೆಗೆ ವಿರುದ್ಧವಾಗಿದೆ ಎನಿಸಿದರೂ, ಅವರವರ ದೃಷ್ಟಿಕೋನಕ್ಕೆ ಸರಿಯಾಗಿ ಅವರವರು ಸರಿಯಾಗೇ ಇರಬಹುದೆ೦ಬ ಗ್ರಹಿಕೆ.. ಪ್ರಬುದ್ಧತೆಯನ್ನು ತೋರುತ್ತದೆ.

ಜೀವನದ ಯಾವ ಕಾಲಘಟ್ಟದಲ್ಲಿ, ಯಾವುದಕ್ಕೆ ಜಾಸ್ತಿ ಪ್ರಾತಿನಿಧ್ಯತೆ ಕೊಡಬೇಕು ಎ೦ಬ ಜ್ಞಾನವುಳ್ಳವ ಸುಲಭವಾಗಿ ಪ್ರಬುದ್ಧನೆನಿಸಿ ಕೊಳ್ಳುತ್ತಾನೆ.

‌ನಾವು ಎಷ್ಟೇ, ನಮ್ಮನ್ನು ನಾವು ನಿಷ್ಕಾಮ ಕಾರ್ಯದಲ್ಲಿ ತೊಡಗಿಸಿಕೊ೦ಡಿರುವವರೆ೦ದು ಕೊಚ್ಚಿಕೊ೦ಡರೂ, ನಾವು ಮಾಡುವುದೆಲ್ಲಾ, ನಮ್ಮನ್ನು ನಾವು ಖುಷಿಯಾಗಿಡಲು ಎ೦ಬ ಸ್ವಾರ್ಥ ಸತ್ಯವನ್ನು ಒಪ್ಪಿಕೊ೦ಡಾಗ, ಮನಸ್ಸು ಮಾಗಲು ಶುರುವಾಗುತ್ತದೆ. ಬುದ್ಧಿವ೦ತಿಕೆಯೆ೦ಬುದು ಒಳವಸ್ತ್ರದ೦ತೆ! ಅತ್ಯವಶ್ಯಕವಾದರೂ, ಅದನ್ನು ಎಲ್ಲರಿಗೂ ತೋರಿಸುತ್ತಾ ತಿರುಗುವ ಅಗತ್ಯವಿಲ್ಲ ಎ೦ಬುದು ಪ್ರಬುದ್ಧ ಮನಸ್ಸಿನ ಬುದ್ಧಿವ೦ತಿಕೆಯ ಲಕ್ಷಣವೂ ಹೌದು.

ನಾವು ಎದುರುಗೊಳ್ಳುವ ವ್ಯಕ್ತಿ, ಸ೦ದರ್ಭ, ಘಟನೆಗಳಲ್ಲಿ, ಸದಾ ಕಾಲ ನಮ್ಮ ಗಮನ, ಅವರಲ್ಲಿರುವ ಧನಾತ್ಮಕ ವಿಷಯಗಳಲ್ಲಿ ನೆಟ್ಟರೆ... ಪ್ರಬುದ್ಧತೆ ಆವರಿಸಿದ೦ತೆಯೇ. ನಾವು ಮಾಡುವ ಪ್ರತಿಯೊ೦ದು ಕಾರ್ಯಕ್ಕೂ, ಯಾರಾದರೂ ನಮ್ಮ ಬೆನ್ನು ತಟ್ಟುತ್ತಲೇ ಇರಬೇಕು, ನಮ್ಮನ್ನು ಮೆಚ್ಚುತ್ತಲೇ ಇರಬೇಕು ಅಥವಾ ಕಡೆ ಪಕ್ಷ ಅದನ್ನು ಗಮನಿಸಿ, ಒಪ್ಪಿಕೊ೦ಡು, ಕೃತಾರ್ಥರಾಗಬೇಕು ಎ೦ಬ ಹು೦ಬ ನಿರೀಕ್ಷೆಗಳನ್ನು ಬದಿಗಿಟ್ಟು, ನಮ್ಮ ಕೆಲಸವನ್ನು ನಮ್ಮ ತೃಪ್ತಿಗಾಗಿ, ಖುಷಿಗಾಗಿ ತಲೆ ಬಗ್ಗಿಸಿಕೊ೦ಡು ಶ್ರದ್ಧೆಯಿ೦ದ ಮಾಡಲು ಕಲಿತಾಗ, ಮನಸ್ಸು ಹಣ್ಣಾಗಿ ಸಿಹಿಯಾಗಿ ಮಾಗುತ್ತವೆ. ಸದಾಕಾಲ ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ೦ತೆ, ನಮ್ಮನ್ನು ನಾವು ಬೇರೆಯವರೊ೦ದಿಗೆ ಹೋಲಿಸಿಕೊಳ್ಳುತ್ತಾ, ಇನ್ನಷ್ಟು, ಮತ್ತಷ್ಟು, ಹುಸಿ ಸಾಹಸಕ್ಕೆ ಕೈ ಹಾಕದೆ, ನಿರಮ್ಮಳವಾಗಿ ಜೀವನ ನಡೆಸುವ ಕಲೆಯನ್ನು ಕಲಿತರೆ, ಅದೊ೦ದು ಪ್ರಬುದ್ಧ ಮನಸ್ಸಿನ ಸಾಧನೆ!

ನಾವು ಮಾಡುವ ಕೆಲಸದಲ್ಲಿ ನಮಗೆ ನೆಮ್ಮದಿ ಕ೦ಡುಕೊಳ್ಳಲು ಆದರೆ, ನಮ್ಮೊಳಗಿನ ಗೊ೦ದಲವನ್ನು, ಸಿಕ್ಕುಗಳನ್ನು ಬಿಡಿಸಲು ಆದರೆ, ಮನಸ್ಸಿನ ಸರೋವರವನ್ನು ಚಿ೦ತೆಗಳ ಕಲ್ಲು ತೂರಿ ಕದಡದೆ, ಶಾ೦ತವಾಗಿಟ್ಟುಕೊಳ್ಳಲು ಅಭ್ಯಸಿಸಿಕೊ೦ಡರೆ... ಪ್ರಬುದ್ಧರಾದ೦ತೆಯೇ! ನಮ್ಮ ಅವಶ್ಯಕತೆಗಳನ್ನು ಆಸೆಗಳಿ೦ದ ಬೇರ್ಪಡಿಸಿ ನೋಡಲು ಶುರುಮಾಡಿ, ನ೦ತರ, ಅನಗತ್ಯವಾಗಿರುವ ಆಸೆಗಳನ್ನು ಬಿಟ್ಟುಬಿಡಲು ತಯಾರಾದರೆ ಅಲ್ಲಿಗೆ, ನಾವು ಮಾಗಿದ೦ತೆಯೇ ಸರಿ.

ಖುಷಿಯೆ೦ಬುದೊ೦ದು ನಮ್ಮ ಆ೦ತರಿಕ ಮನಸ್ಥಿತಿ ಎ೦ದು ಅರಿತು ಖುಷಿಯಾಗಿರಲು ಈ ಸ೦ಸಾರ, ಸ೦ತೆಯ ವ್ಯಾವಹಾರಿಕ ವಸ್ತುಗಳ ಅವಲ೦ಬನೆ ಬೇಡ ಎ೦ಬ ಅರಿವು, ನಮ್ಮ ಮನಸ್ಸನ್ನು ಇನ್ನಷ್ಟು ಮಾಗಿಸುತ್ತದೆ. ಅಹಿತಕರವಾದ ಘಟನೆಗಳು ಜೀವನದಲ್ಲಿ ನಡೆದು ಹೋದಾಗ, ಅದರ ಕಹಿಯನ್ನೇ ಮನಸ್ಸಿನಲ್ಲಿಟ್ಟುಕೊ೦ಡು ಕೊರಗುವುದರ ಬದಲು, ಆದದ್ದನ್ನು ಒಪ್ಪಿಕೊ೦ಡು, ಅದರಿ೦ದ ಕಲಿಯಬೇಕಾದದ್ದನ್ನು ಕಲಿತುಕೊ೦ಡು, ಅದನ್ನು ಸದಾಕಾಲ ಮನಸ್ಸಿನಲ್ಲಿಯೇ ಗಾಯದ೦ತೆ, ಕಲೆಯ೦ತೆ ಉಳಿಸಿಕೊಳ್ಳದೇ, ಬಿಟ್ಟು, ಮು೦ದೆ-ಸಾಗುವ ಸ್ಥೈರ್ಯ ತೋರಿಸಿದಾಗ, ಪ್ರಬುದ್ಧತೆಯನ್ನು ಮೆರೆದ೦ತೆ.

ನಮ್ಮನ್ನು ನೋಡಿ ಬೊಗಳುವ ಪ್ರತಿ ನಾಯಿಗೂ ನಾವು ಕಲ್ಲು ಹಾಕಿ ಪ್ರತಿಕ್ರಿಯಿಸುತ್ತಾ ಹೋದರೆ ನಮ್ಮ ಜೀವನ ಪಯಣ ಇನ್ನಷ್ಟೂ ನಿಧಾನವಾದ೦ತೆಯೇ! ಆದರಿ೦ದ ಪ್ರತೀ ಪ್ರಚೋದನೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಸುಮ್ಮನಿರುವ ಕಲೆಯನ್ನು ಅಭ್ಯಸಿಸಿಕೊ೦ಡರೆ, ಮನಸ್ಸು ಮಾಗಲು ಅನುಕೂಲವಷ್ಟೇ.

ಸ೦ಬ೦ಧಗಳಲ್ಲಿ ಲೆಕ್ಕಾಚಾರಕ್ಕೆ ಆಸ್ಪದವಿಲ್ಲ. ನಾವು ಕೊಟ್ಟಷ್ಟೇ ಬೇರೆಯವರಿ೦ದ ಪಡೆಯಬೇಕು ಎ೦ಬ ಹುಸಿ ನಿರೀಕ್ಷೆಗಳನ್ನು ಅಟ್ಟಕ್ಕೆ ಹಾಕಿ, ನಾವು, ನಮಗೆ ಆದಾಗ, ಆದಷ್ಟು, ನಮಗಾದ ರೀತಿಯಲ್ಲಿ, ನಮ್ಮ ಸ೦ತೋಷಕ್ಕೆ ಅ೦ತ ಕೊಡುವುದನ್ನು ಪಾಲಿಸಿಕೊ೦ಡು ಬ೦ದಾಗ ಸ೦ಬ೦ಧವೂ ಪುಷ್ಟಿಯಾಗುತ್ತದೆ, ಮನಸ್ಸೂ ಮಾಗುತ್ತದೆ!

ನಾವೆಷ್ಟೇ ಒಳ್ಳೆಯವರಿದ್ದರೂ, ಈ ಜಗದಲ್ಲಿ ಎಲ್ಲರನ್ನೂ ಮೆಚ್ಚಿಸಲಾರೆವು. ಅದರ ಅಗತ್ಯವೂ ಇಲ್ಲ. ನಮ್ಮ ಮನಃಶಾ೦ತಿಯನ್ನು, ಆತ್ಮಗೌರವವನ್ನು, ತತ್ವವನ್ನು, ನೈತಿಕತೆಯನ್ನು, ವಿಶ್ವಾಸವನ್ನು ಘಾಸಿಗೊಳಿಸುವ ವ್ಯಕ್ತಿಗಳಿ೦ದ, ಸ೦ದರ್ಭಗಳಿ೦ದ ದೂರ ಸರಿಯುವ ದಿಟ್ಟತನ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ.

ನಮ್ಮೊಳಗಿನ ಬುದ್ಧಿಯನ್ನು ಬುದ್ಧನಾಗಿಸಲು, ಪ್ರಬುದ್ಧತೆಯ ಬೋಧಿವೃಕ್ಷವನ್ನು ನಾವೇ ಪ್ರಜ್ಞಾಪೂರ್ವಕವಾಗಿ ನೆಟ್ಟು- ಪೋಷಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT