ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಣ ಸಚಿವ ನಾಗೇಶ್

ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಿಸಲು ಕ್ರಮ: ಬಿ.ಸಿ. ನಾಗೇಶ್
Last Updated 2 ನವೆಂಬರ್ 2021, 16:15 IST
ಅಕ್ಷರ ಗಾತ್ರ

ಉಜಿರೆ: ‘ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಮಂಗಳವಾರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಲೆಗೆ ಬಂದ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಸಚಿವರು ಪುಟಾಣಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಅವರನ್ನು ಶಾಲೆಗೆ ಸ್ವಾಗತಿಸಿದರು.

ಶಾಲೆಯಲ್ಲಿ ಆರಂಭಿಸಿರುವ ‘ಚಿಣ್ಣರ ಚಿಲುಮೆ‘ ಮಾದರಿ ತರಗತಿಯನ್ನು ವೀಕ್ಷಿಸಿ, ಕನ್ನಡ ಅಕ್ಷರ ಮಾಲೆ, ಇಂಗ್ಲೀಷ್ ಅಕ್ಷರಗಳು, ಗ್ರಹಗಳು ಮತ್ತು ನಕ್ಷತ್ರಗಳು, ಗಣಿತದ ಚಿಹ್ನೆಗಳನ್ನು ಮಕ್ಕಳು ನಲಿ-ಕಲಿ ತತ್ವದಡಿ ಕಲಿಯುವ ಪ್ರಾತ್ಯಕ್ಷಿಕೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

’ನವೆಂಬರ್‌ 1ರಿಂದ ರಾಜ್ಯದಲ್ಲಿ 1ರಿಂದ 10ನೇತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಪ್ರಾರಂಭವಾಗಿದೆ. ಶಿಕ್ಷಕರು ಪ್ರೀತಿ, ವಿಶ್ವಾದಿಂದ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಬೇಕು. ಮಕ್ಕಳಲ್ಲಿರುವ ಭಯ, ಆತಂಕ ನಿವಾರಿಸಿ ಲವಲವಿಕೆಯಿಂದ ಅವರು ಶಾಲೆಗೆ ಬರುವಂತೆ ಪ್ರೇರೇಪಿಸಬೇಕು’ ಎಂದರು.

ಧರ್ಮಸ್ಥಳವು ದೇಶಕ್ಕೆ ಮಾದರಿಯಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಸಚಿವರು ಶ್ಲಾಘಿಸಿ ಅಭಿನಂದಿಸಿದರು.

ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯೋಜನಾಧಿಕಾರಿ ಪುಷ್ಪರಾಜ್, ತಹಶೀಲ್ದಾರ್ ಮಹೇಶ್ ಜೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಇದ್ದರು. ವಸಂತ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ರಾವ್ ಸ್ವಾಗತಿಸಿದರು. ಪೂರ್ಣಿಮಾ ಜೋಶಿ ವಂದಿಸಿದರು. ಮನೋರಮಾ ತೋಳ್ಪಾಡಿತ್ತಾಯ ನಿರೂಪಿಸಿದರು.

55 ಹೈಟೆಕ್ ಶೌಚಾಲಯ ಲೋಕಾರ್ಪಣೆ

ಬೆಳ್ತಂಗಡಿ: ‘ರಾಜ್ಯದಲ್ಲಿ ಹೊಸ ಶಿಕ್ಷಣ ಕ್ರಾಂತಿ ಪ್ರಾರಂಭವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಎಂಆರ್‌ಪಿಎಲ್‌ನ ಸಿಎಸ್‌ಆರ್‌ ಅನುದಾನದಿಂದ ತಾಲ್ಲೂಕಿನ 55 ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ತಲಾ ₹10 ಲಕ್ಷ ವೆಚ್ಛದಲ್ಲಿ ನಿರ್ಮಿಸಿರುವ 55 ಹೈಟೆಕ್ ಶೌಚಾಲಯಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ವ ಶಿಕ್ಷಣ ಅಭಿಯಾನದಿಂದಾಗಿ ಮಕ್ಕಳು ಶಾಲೆಗೆ ಬರುವಂತಾಯಿತು. ಕರ್ನಾಟಕ ಸರ್ಕಾರ 48 ಸಾವಿರ ಶಾಲೆಗಳನ್ನು ನಿರ್ವಹಿಸುತ್ತಿದೆ. ಶಾಸಕ ಹರೀಶ್ ಪೂಂಜ ಅವರ ಮನವಿಯಂತೆ ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗುವುದು’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಶಾಲೆಗಳಲ್ಲಿ ವಿನೂತನ ಕಲ್ಪನೆಯಲ್ಲಿ ಶೌಚಾಲಯ ಮೂಡಿಬಂದಿದೆ. ಎಂಆರ್‌ಪಿಎಲ್‌ ಸಂಸ್ಥೆಯು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ₹100 ಕೋಟಿ ಅನುದಾನ ಒದಗಿಸಿದೆ’ ಎಮದರು.

‘ಸಿ.ಎಸ್.ಆರ್. ಅನುದಾನದಡಿ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ 55 ಶೌಚಾಲಯ ನಿರ್ಮಾಣವಾಗಿದ್ದರೆ ಅದು ಬೆಳ್ತಂಗಡಿ ಕ್ಷೇತ್ರದಲ್ಲಿ ಮಾತ್ರ. ಗ್ತಾಮೀಣ ಪ್ರದೇಶವಾದ ರೆಖ್ಯ, ಅರಸಿನಮಕ್ಕಿ, ಕೊಕ್ಕಡ ಪ್ರದೇಶದ ವಿದ್ಯಾರ್ಥಿಗಳನ್ನು ಒಂದೇ ಕ್ಲಸ್ಟರ್‌ನಡಿ ತಂದು 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಿಸುವ ಸಲುವಾಗಿ ರೂಪುರೇಷೆ ಸಿದ್ಧಪಡಿಸಲಾಗಿದೆ’ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕ ಎಂ.ವೆಂಕಟೇಶ್, ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ರವಿ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆ ವಿದ್ಯಾಂಗ ಉಪನಿರ್ದೇಶಕ ಮಲ್ಲೇಸ್ವಾಮಿ, ಎಂಆರ್‌ಪಿಎಲ್‌ ಸಿಎಸ್‌ಆರ್‌ ವಿಭಾಗದ ಡಿಜಿಎಂ ವೀಣಾ ಶೆಟ್ಟಿ, ಕೊಕ್ಕಡ ಸಿ.ಎ.ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಇದ್ದರು.

ಉಜಿರೆ ಹಳೆಪೇಟೆ ಶಾಲೆಯಲ್ಲಿನ ಹೈಟೆಕ್‌ ಶೌಚಾಲಯವನ್ನು ಸಚಿವರು ಸಾಂಕೇತಿಕವಾಗಿ ಉದ್ಘಾಟಿಸಿದರು.ಸುಬ್ರಾಯ ಭಟ್ ಹಾಗೂ ಗಣೇಶ್ ಗೌಡ ಉಜಿರೆ ಅವರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ವಿರೂಪಾಕ್ಷಪ್ಪ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕೊಕ್ರಾಡಿ ನಿರೂಪಿಸಿದರು. ಧರಣೇಂದ್ರ ಕೆ.ಜೈನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT