ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 640 ಸೂಕ್ಷ್ಮ ಮತಗಟ್ಟೆ: ರಾಜೀವ್‌ ರತನ್‌

ಸೋಮವಾರ, ಏಪ್ರಿಲ್ 22, 2019
33 °C
ಮೈಕ್ರೋ ವೀಕ್ಷಕರಿಗೆ ಇವಿಎಂ, ವಿವಿ ಪ್ಯಾಟ್‌ಗಳ ಪ್ರಾತ್ಯಕ್ಷಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 640 ಸೂಕ್ಷ್ಮ ಮತಗಟ್ಟೆ: ರಾಜೀವ್‌ ರತನ್‌

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 640 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ, ವೆಬ್ ಕ್ಯಾಮೆರಾ ಮತ್ತು ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗುತ್ತಿದೆ. ಈ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಚುನಾವಣಾ ವೀಕ್ಷಕ ರಾಜೀವ್‌ ರತನ್‌ ಹೇಳಿದರು.

ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಗುರುವಾರ ಮೈಕ್ರೋ ವೀಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಮೇಲ್ವಿಚಾರಣೆಯಲ್ಲಿ ಮತದಾನ ನಡೆಯಲಿದ್ದು, 350 ಮೈಕ್ರೋ ವೀಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ನೋಡಿಕೊಳ್ಳುವ ಬಹುಮುಖ್ಯ ಹೊಣೆಗಾರಿಕೆ ಮೈಕ್ರೋ ವೀಕ್ಷಕರದ್ದು ಎಂದು ತಿಳಿಸಿದರು.

ಮತಗಟ್ಟೆಯ ಬಳಿ ಅಹಿತಕರ ಘಟನೆಗಳು ನಡೆದರೆ, ಮತಯಂತ್ರಗಳಲ್ಲಿ ದೋಷ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದಿರಬೇಕು. ಆಯೋಗ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಮತದಾನ ನಡೆಯುವ ಹಿಂದಿನ ದಿನವೇ ಇತರೆ ಸಿಬ್ಬಂದಿ ಜತೆ ಮತಗಟ್ಟೆಯಲ್ಲಿರಬೇಕು ಎಂದು ಸೂಚಿಸಿದರು.

ಮತದಾನದ ದಿನ ಬೆಳಿಗ್ಗೆ 6 ರಿಂದ ನಡೆಸುವ ಅಣಕು ಮತದಾನ ಪರಿಶೀಲಿಸಿ, ಖಚಿತಪಡಿಸಿಕೊಂಡ ನಂತರ ಅಳಿಸಿ ಹಾಕಬೇಕು. ಮತಗಟ್ಟೆಯೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿ ನೀಡಬಾರದು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಚುನಾವಣಾ ಏಜೆಂಟರಿಗೆ ಅನುಮತಿ ನೀಡಬಾರದು ಎಂದು ತಿಳಿಸಿದ ಅವರು, ಏನಾದರೂ ತೊಂದರೆಯಾದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಸೂಚನೆ ನೀಡಿದರು.

ಮತದಾನದ ದಿನ ಮತದಾನದ ಪ್ರಮಾಣ, ಮತಯಂತ್ರದಲ್ಲಿನ ದೋಷಗಳು ಕಂಡುಬಂದರೆ, ಮತಗಟ್ಟೆಗೆ ಭೇಟಿ ನೀಡಿದ ಸೆಕ್ಟರ್ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿವರ, ಅನಧಿಕೃತ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸಿದ ವಿವರ, ಮತದಾನಕ್ಕೆ ಯಾವುದೇ ಅಡಚಣೆಯಾದರೆ ಮಾಹಿತಿ ನೀಡುವಂತೆ ಸೂಚಿಸಿದರು.

ಮೈಕ್ರೋ ವೀಕ್ಷಕರಿಗೆ ಇವಿಎಂ, ವಿವಿ ಪ್ಯಾಟ್‌ಗಳ ಕುರಿತು ಡಾ. ಜಾನ್ ಪಿಂಟೋ ಪ್ರಾತ್ಯಕ್ಷಿಕೆ ನೀಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ವೆಂಕಟಾಚಲಪತಿ, ಸಹಾಯಕ ಆಯುಕ್ತೆ ಪ್ರಮೀಳಾ, ಮಾಸ್ಟರ್ ಟ್ರೈನರ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !