ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಗಳ ಸಾಮೂಹಿಕ ಆಚರಣೆಗೆ ನಿಯಂತ್ರಣ

ಪತ್ರಕರ್ತರ ಸಂಘದ ಮಾಧ್ಯಮ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ
Last Updated 12 ಆಗಸ್ಟ್ 2021, 4:38 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ತಗ್ಗಿಸುವ ಉದ್ದೇಶದಿಂದ ನಾಗರ ಪಂಚಮಿಯಿಂದ ದಸರಾವರೆಗೆ ಎಲ್ಲ ಹಬ್ಬಗಳಲ್ಲಿ ಸಾರ್ವಜನಿಕರು ಸಾಮೂಹಿಕವಾಗಿ ಭಾಗವಹಿಸುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಯೋಚಿಸಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ತುಳುನಾಡಿನ ಪ್ರಮುಖ ಆಚರಣೆಯಾದ ನಾಗರ ಪಂಚಮಿಯಂದು ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶವಿಲ್ಲ. ದೇವಸ್ಥಾನಗಳಲ್ಲಿ ಕನಿಷ್ಠ ಜನರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಬಹುದು. ಹಬ್ಬಗಳನ್ನು ಜನರು ಮನೆಯಲ್ಲಿ ಆಚರಿಸುವುದಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲೆಯಲ್ಲಿ ನಾಗಬನ ಹಾಗೂ ಕುಟುಂಬದ ಮನೆಗಳಲ್ಲಿ ಆಚರಿಸುವ ಪೂಜೆಗಳನ್ನು ಸಹ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ, ಜನಸಮೂಹ ಸೇರದಂತೆ ಎಚ್ಚರಿಕೆವಹಿಸಬೇಕು. ಈ ಸಂಬಂಧ ಸ್ಥಳೀಯ ಆಡಳಿತ ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ. ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯನ್ನು ಸಹ ನಿಗದಿತ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿ, ಗಣೇಶ ಹಬ್ಬದ ಸಂದರ್ಭದಲ್ಲೂ ಸಾರ್ವಜನಿಕವಾಗಿ ಚಪ್ಪರ, ಶಾಮಿಯಾನ ಹಾಕಿಕೊಂಡು, ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಬಾರದೆಂದು ಯೋಚಿಸಲಾಗಿದೆ. ಸರ್ಕಾರ ಆಯಾ ಸಂದರ್ಭದಲ್ಲಿ ನೀಡುವ ನಿರ್ದೇಶನ ಪಾಲಿಸಲಾಗುವುದು ಎಂದು ತಿಳಿಸಿದರು.

ಶಾಲೆ- ಕಾಲೇಜು ಆರಂಭ ವಿಳಂಬ ಸಾಧ್ಯತೆ: ರಾಜ್ಯದಲ್ಲಿ ಶಾಲೆ– ಕಾಲೇಜು ಆರಂಭದ ಬಗ್ಗೆ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣ ಶಾಲೆ–ಕಾಲೇಜು ಆರಂಭ ತುಸು ವಿಳಂಬ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಲಾಕ್‌ಡೌನ್ ಪರಿಸ್ಥಿತಿ ಇಲ್ಲ: ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚಿರುವುದು ನಿಜ. ಆದರೆ, ಸುಸಜ್ಜಿತ ಆಧುನಿಕ ಆಸ್ಪತ್ರೆಗಳು, ಗಡಿ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಿರುವ ಕಾರಣ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಮತ್ತೆ ಲಾಕ್‌ಡೌನ್ ಮಾಡುವಂತಹ ಪರಿಸ್ಥಿತಿ ಇಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುತ್ತದೆ ಎನ್ನುವ ಮೂಲಕ ಡಾ. ರಾಜೇಂದ್ರ, ಆಗಸ್ಟ್ 15ರ ಬಳಿಕ ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತದೆ ಎಂಬ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.

ಸ್ವಯಂ ಪ್ರೇರಣೆಯ ನಿರ್ಧಾರ ಬೇಕು: ಜಿಲ್ಲೆಯಲ್ಲಿ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಜನರು ಸ್ವಯಂ ಪ್ರೇರಣೆಯಿಂದ ಕಡಿಮೆ ಮಾಡಬೇಕು. ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು. ಜನರ ಸಹಕಾರ ಕೂಡ ಮುಖ್ಯ. ಕೋವಿಡ್ ಲಕ್ಷಣ ಕಂಡಾಗ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರು ವಾರಾಂತ್ಯದಲ್ಲಿ ಅನಗತ್ಯವಾಗಿ ಸಂಚರಿಸುವುದನ್ನು ತಪ್ಪಿಸಲು ಕರ್ಫ್ಯೂ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

‘ವೆನ್ಲಾಕ್‌ನಲ್ಲಿ 32 ಹಾಸಿಗೆಗಳ ಹೈಟೆಕ್ ಐಸಿಯು’

ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಜ್ಞರು ಉಲ್ಲೇಖಿಸಿರುವ ಕಾರಣ, ಮಕ್ಕಳ ಆರೋಗ್ಯ ಕಾಳಜಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 86ಕ್ಕೂ ಹೆಚ್ಚು ಮಕ್ಕಳ ತಜ್ಞರು ಇದ್ದಾರೆ. ಮಕ್ಕಳ ತಜ್ಞರ ಸಂಘಟನೆ ಜೊತೆ ವಾರಕ್ಕೊಮ್ಮೆ ಸಭೆ ನಡೆಸಿ, ಚರ್ಚಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಮಕ್ಕಳ ಆರೈಕೆ ಕೇಂದ್ರವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಆಮ್ಲಜನಕ ವ್ಯವಸ್ಥೆ ಸಹಿತವಾದ75 ಹಾಸಿಗೆ ಸಿದ್ಧವಿದೆ. ವೆನ್ಲಾಕ್‌ನಲ್ಲಿ 32 ಹಾಸಿಗೆಗಳ ಹೈಟೆಕ್ ಐಸಿಯು ತೆರೆಯಲಾಗುತ್ತದೆ. ಅಗತ್ಯ ಮನಗಂಡು, ಇದರಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಮಕ್ಕಳಿಗೆ ಕಾಯ್ದಿಡಲಾಗುತ್ತದೆ. ಆಗಸ್ಟ್ 12ರಂದು ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಉದ್ಘಾಟಿಸುವರು. ಮಕ್ಕಳಿಂದ ಹಿರಿಯರವರೆಗಿನ ಎಲ್ಲ ರೋಗಿಗಳಿಗೆ ಬಳಸಬಹುದಾದ 90 ವೆಂಟಿಲೇಟರ್ ಹಾಸಿಗೆಗಳು ಲಭ್ಯ ಇವೆ ಎಂದು ತಿಳಿಸಿದರು.

‘ದಿನಕ್ಕೆ 11 ಸಾವಿರ ಪರೀಕ್ಷೆ’

ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಕೋವಿಡ್ ಪರೀಕ್ಷೆ ಹೆಚ್ಚು ಮಾಡಲಾಗಿದೆ. ಪಾಸಿಟಿವಿಟಿ ದರ ಕಡಿಮೆ ಮಾಡಲು ದಿನಕ್ಕೆ 11 ಸಾವಿರ ಪರೀಕ್ಷೆ ಗುರಿ ಹೊಂದಲಾಗಿದೆ. ಹೆಚ್ಚುವರಿ ಪ್ರಯೋಗಾಲಯ ಸಿಬ್ಬಂದಿ ನೇಮಿಸಿ, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ನೀಡಿ ಪರೀಕ್ಷೆ ಹೆಚ್ಚಿಸಲಾಗುವುದು ಎಂದು ಡಾ. ರಾಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT