ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಕಲಾವಿದರಿಗೆ ಆರ್ಥಿಕ ನೆರವು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮೇಳಗಳ ಸಂಚಾಲಕರ ಸಭೆಯಲ್ಲಿ ಸಚಿವ ಕೋಟ ಭರವಸೆ
Last Updated 7 ಅಕ್ಟೋಬರ್ 2020, 3:18 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ನಿಂದಾಗಿ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿ ಸಿಲುಕಿದ್ದು, ಯಾವುದೇ ಕಲಾವಿದನಿಗೆ ಅನ್ಯಾಯವಾಗದಂತೆ ಶೀಘ್ರದಲ್ಲಿಯೇ ಸರ್ಕಾರದಿಂದ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಯಕ್ಷಗಾನ ಮೇಳಗಳ ಸಂಚಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20 ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ಜಂಟಿಯಾಗಿ ಯಕ್ಷಗಾನ ಅಕಾಡೆಮಿಯಿಂದ ಕಲಾವಿದರ ಮಾಹಿತಿ ಪಡೆದುಕೊಂಡು, ಕಲಾವಿದರ ದಾಖಲೀಕರಣ ಮಾಡಿ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಯಕ್ಷಗಾನ ನಡೆಯುವ ಆ ಪ್ರದೇಶದ ಸುತ್ತ ಸ್ಯಾನಿಟೈಸ್‌ ಮಾಡಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮುಖಗವಸು ಹಾಕುವಂತೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದರು.

ಯಕ್ಷಗಾನದ ತಂಡದ ಉಜಿರೆ ಅಶೋಕ್ ಭಟ್ ಮಾತನಾಡಿ, ಪ್ರತಿ ವರ್ಷ ಯಕ್ಷಗಾನ ಪ್ರದರ್ಶನಗಳು ಮೇ ನಲ್ಲಿ ಆರಂಭವಾಗುತ್ತವೆ. ಆದರೆ ಈ ವರ್ಷ ಕೋವಿಡ್‌–19ನಿಂದಾಗಿ ಮುಂಗಡವಾಗಿ ಕಾಯ್ದಿರಿಸಿದ್ದ ಹಲವು ಯಕ್ಷಗಾನ ಪ್ರದರ್ಶನಗಳು ರದ್ದಾಗಿದೆ. ಹರಕೆಯ ಯಕ್ಷಗಾನ ಆಟ ಬಿಟ್ಟರೆ, ಬೇರೆ ಯಾವುದೇ ಯಕ್ಷಗಾನ ಪ್ರದರ್ಶನಗಳೂ ಈ ಬಾರಿ ಇಲ್ಲದಿರುವುದು ಬಹು ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.

ಬಪ್ಪನಾಡು, ಸಸಿಹಿತ್ಲು ಮೇಳಗಳ ಸಹಿತ ಅನೇಕರು ಕೋವಿಡ್‌ ಸಂದರ್ಭದಲ್ಲಿ ಕಲಾವಿದರು ಮತ್ತು ವೃತ್ತಿಪರ ಮೇಳಗಳ ಸಮಸ್ಯೆಗಳನ್ನು ವಿವರಿಸಿದರು. ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಕಲಾವಿದರ ಪರವಾಗಿ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಸೀತಾರಾಮ್ ಕುಲಾಲ್, ಯಕ್ಷಗಾನ ತಂಡಗಳ ಸಂಚಾಲಕರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

ಕಟೀಲಿನ ಆರು ಮೇಳಗಳು ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಹೊರಡಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ
ಹರಿನಾರಾಯಣ ಅಸ್ರಣ್ಣ
ಕಟೀಲು ದೇವಳದ ಆಡಳಿತ ಮೊಕ್ತೇಸರ

ಬಯಲು ಪ್ರದೇಶಗಳಲ್ಲಿ ಯಕ್ಷಗಾನ ಪ್ರಾರಂಭಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಕಡ್ಡಾಯವಾಗಿ 200 ಜನ ಮೀರದಂತೆ ಕ್ರಮವಹಿಸಬೇಕು.
ಡಾ.ಕೆ.ವಿ. ರಾಜೇಂದ್ರ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT