ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರದಲ್ಲಿ ಸಂಗೀತ ಇರಲಿ: ಪ್ರವೀಣ್ ಗೋಡ್ಖಿಂಡಿ

ಸಂವಾದ ಕಾರ್ಯಕ್ರಮ
Last Updated 9 ನವೆಂಬರ್ 2019, 19:32 IST
ಅಕ್ಷರ ಗಾತ್ರ

ಮಂಗಳೂರು: ‘ಸಂಗೀತದ ಸುಖವನ್ನು ಅನುಭವಿಸದ ಮಕ್ಕಳಿಂದ ಈ ಕ್ಷೇತ್ರದಲ್ಲಿ ಸಾಧನೆ ಅಸಾಧ್ಯ... ನಿಮ್ಮ ಪರಿಸರದಲ್ಲೇ ಸಂಗೀತ ಇರಲಿ.’

ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿಧ್ಯಾಭವನದಲ್ಲಿ ಶನಿವಾರ ಹಮ್ಮಿಕೊಂಡ ಸಂವಾದದಲ್ಲಿ ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ ಅಭಿವ್ಯಕ್ತಿಸಿದ ಸ್ಪಷ್ಟ ನುಡಿ.

‘ಮಕ್ಕಳು ಸಂಗೀತದ ಸುಖ ಅನುಭವಿಸಲು ಮನೆ ಹಾಗೂ ಅವರ ಪರಿಸರದಲ್ಲಿ ಪೂರಕ ವಾತಾವರಣವನ್ನು ನೀವು ಒದಗಿಸಬೇಕು. ಅವರಲ್ಲಿ ಆಸಕ್ತಿ ಚಿಗುರಿದಾಗ ತರಬೇತಿಯನ್ನು ಆರಂಭಿಸಿ’ ಎಂದು ಸಲಹೆ ನೀಡಿದರು.

‘ನನ್ನ ತಂದೆ (ವೆಂಕಟೇಶ ಗೋಡ್ಖಿಂಡಿ) ಅತ್ಯುತ್ತಮ ಕೊಳಲು ವಾದಕರು ಹಾಗೂ ಆಕಾಶವಾಣಿ ಕಲಾವಿದರು. ಹೀಗಾಗಿ, ನಾನು ಹುಟ್ಟುವ ಸಂದರ್ಭದಲ್ಲೇ ಮನೆ ಹಾಗೂ ಪರಿಸರದಲ್ಲಿ ಸಂಗೀತದ ನಿನಾದವಿತ್ತು. ವಾತಾವರಣದಲ್ಲೇ ಆಗ ಗುಂಗು ಇತ್ತು. ಸಂಗೀತದ ಸ್ವರ, ರಾಗಗಳನ್ನು ಕೇಳುತ್ತಲೇ ನಾನು ಬೆಳೆದೆನು. ಆಕಾಶವಾಣಿ ಸ್ಟುಡಿಯೊಗಳಿಗೆ ಕೂಡಾ ತಂದೆಯವರು ನನ್ನನ್ನು ಕರೆದೊಯ್ಯುತ್ತಿದ್ದರು’ ಎಂದು ತಮ್ಮ ಆರಂಭಿಕ ದಿನಗಳನ್ನು ಅವರು ಮೆಲುಕು ಹಾಕಿದರು.

‘ನನ್ನ ಪುತ್ರನಿಗೆ ಕೂಡ ಇಂತಹದೇ ವಾತಾವರಣ ದೊರೆಯಿತು. ನನ್ನ ತಂದೆಯವರು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡೇ ಸಂಗೀತದ ಪಾಠ ಹೇಳಿಕೊಟ್ಟರು. ಎಲ್ಲ ಮಕ್ಕಳು ಚಿಕ್ಕಿಂದಿನಲ್ಲಿ ಕಾರು, ಬಸ್ ಮುಂತಾದ ಆಟಿಕೆಗಳ ಜತೆ ಆಡುತ್ತಿದ್ದರೆ, ನನ್ನ ಮಗ ಸಂಗೀತದ ಪರಿಕರಗಳ ಜತೆ ಆಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದನು. ಆದ್ದರಿಂದಲೇ ಅವನು ಇಂದು ಕಲಾವಿದನಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಧನ್ಯತೆ ವ್ಯಕ್ತಪಡಿಸಿದರು.

‘ಹೆತ್ತವರ ಒತ್ತಾಯಕ್ಕೆ ಮಣಿದು ಸಂಗೀತ ಅಭ್ಯಾಸಕ್ಕೆ ಬರುವ ಮಕ್ಕಳ ಸಂಖ್ಯೆ ಅಧಿಕವಿದೆ. ಪೂರಕ ವಾತಾವರಣ, ಸ್ವಂತ ಪರಿಶ್ರಮ, ಸೂಕ್ತ ಮಾರ್ಗದರ್ಶನ, ಕೃಪಕಟಾಕ್ಷವಿದ್ದರೆ ಮಾತ್ರ ಸಾಧನೆ ಸಾಧ್ಯ’ ಎಂದು ಸಾಧನೆಯ ಬಗ್ಗೆ ಅವಲೋಕನ ಮಾಡಿದರು.

‘ಹಿಂದುಸ್ತಾನಿ ಶಾಸೀಯ ಸಂಗೀತವೇ ನನ್ನ ಆತ್ಮ. ಸಂಗೀತವೆಂದರೆ ಎರಡು ಪದಾರ್ಥಗಳ ಮಿಶ್ರಣ. ‘ಫ್ಯೂಶನ್’ ಅಂದರೆ ಸ್ವರ, ಲಯ ಬಿಟ್ಟು ಸಂಗೀತ ಎಂಬ ಅರ್ಥವಲ್ಲ. ಇಲ್ಲಿ ಎರಡು ವಸ್ತುಗಳನ್ನು ಎಲ್ಲಿ ಯಾವ ಪ್ರಮಾಣದಲ್ಲಿ ಬೆರೆಸಬೇಕು ಎನ್ನುವುದು ಮುಖ್ಯ. ಶಾಸ್ತ್ರೀಯ ಸಂಗೀತವೆಂದರೆ ಮಡಿವಂತಿಕೆಯ ಪೂಜೆ. ಅದನ್ನು ಇಟ್ಟುಕೊಂಡೇ ಸಂಗೀತದ ಬೇರೆಬೇರೆ ಪ್ರಕಾರಗಳನ್ನು ಸೇರಿಸುವುದು– ಫ್ಯೂಶನ್. ಶಾಸ್ತ್ರೀಯ ಸಂಗೀತವನ್ನು ಹೆಚ್ಚುಮಂದಿ ಶೋತೃಗಳಿಗೆ ತಲುಪಿಸಲು ‘ಫ್ಯೂಶನ್’ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಗಳ ಬಂಧಿ:‘ಜುಗಲ್ ಬಂಧಿ ಭಾಗವಹಿಸುವ ಇಬ್ಬರು ಕಲಾವಿದರು ಪರಸ್ಪರ ಗೌರವದ ಭಾವನೆ ಬೆಳೆಸಿಕೊಂಡಿರಬೇಕು. ಪಾಂಡಿತ್ಯ ಪ್ರದರ್ಶನ ಸಂದರ್ಭ ಪರಸ್ಪರ ಒಂದಿಷ್ಟು ರಾಜಿ ಮಾಡಿಕೊಳ್ಳಲು ಕೂಡ ತಯಾರಿರಬೇಕು. ಇಲ್ಲದಿದ್ದರೆ, ಜುಗಲ್ ಬಂಧಿ ಜಗಳ ಬಂಧಿ ಆಗುವ ಸಾಧ್ಯತೆಯೇ ಅಧಿಕ’ ಎಂದು ಪ್ರವೀಣ್ ಗೋಡ್ಖಿಂಡಿ ಮುಗುಳ್ನಕ್ಕರು.

ಕದ್ರಿ ನೆನೆದ ಗೋಡ್ಖಿಂಡಿ:ಕದ್ರಿ ಗೋಪಾಲನಾಥ್ ಮತ್ತು ನನ್ನ ಜತೆ ಉತ್ತಮ ಬಾಂಧವ್ಯವಿತ್ತು. ಅವರು, ನನಗಿಂತಲೂ ತುಂಬಾ ಹಿರಿಯರೂ, ದೊಡ್ಡ ಸಾಧಕರೂ ಆಗಿದ್ದರು. ಆದರೆ, ಜುಗಲ್ ಬಂಧಿ ಸಂದರ್ಭ ಅವರು ಸಂಗೀತದಲ್ಲಿ ಒಳಗೊಳ್ಳುವ ರೀತಿಯೇ ಅನನ್ಯ ಮಾದರಿಯಾಗಿತ್ತು. ಆದ್ದರಿಂದಲೇ ನಾವು ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಜತೆಯಾಗಿ ನೀಡುವುದು ಸಾಧ್ಯವಾಗಿತ್ತು ಎಂದು ಭಾವುಕರಾದರು.

ಮಣಿ ಕೃಷ್ಣಸ್ವಾಮಿ ಅಕಾಡೆಮಿ ಕಾರ್ಯದರ್ಶಿ ನಿತ್ಯಾನಂದ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT