ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

Last Updated 16 ಆಗಸ್ಟ್ 2021, 13:00 IST
ಅಕ್ಷರ ಗಾತ್ರ

ಮಂಗಳೂರು: ವಿದೇಶಕ್ಕೆ ಹೋಗಲು ವೀಸಾ ಮಾಡಿಸಿಕೊಡುವ ಜತೆಗೆ ಅಲ್ಲಿನ ಕಚೇರಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಲ್ಮಠದ ಖಾಸಗಿ ಆಸ್ಪತ್ರೆ ಸಮೀಪದ ನಿವಾಸಿ ಜೆರಿ ಇಥಿಯಲ್ ಸಿಖಾ (32) ಬಂಧಿತ ಆರೋಪಿ. ‘ಕಾವೂರಿನ ಮಹಿಳೆಯೊಬ್ಬರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಏಪ್ರಿಲ್ ತಿಂಗಳ ಆರಂಭದಲ್ಲಿ ನಗರದ ಜೆರಿ ಇಥಿಯಲ್ ಸಿಖಾ ಕಚೇರಿಗೆ ತೆರಳಿದ್ದರು. ಆ ಮಹಿಳೆ ಉದ್ಯೋಗದ ಬಗ್ಗೆ ವಿಚಾರಿಸಿದಾಗ, ಯುರೋಪ್‌ನ ಲಿಥುವೇನಿಯಾ ದೇಶದಲ್ಲಿ ಕಚೇರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ, ತಿಂಗಳಿಗೆ ₹ 3.5 ಲಕ್ಷ ವೇತನ ಸಿಗಲಿದೆ. ಜೊತೆಗೆ ವೀಸಾ ಕೂಡ ಕೊಡಲಾಗುವುದು. ಇದಕ್ಕೆ ಒಟ್ಟು ₹ 5.5 ಲಕ್ಷ ವೆಚ್ಚ ತಗುಲುವುದಾಗಿ ಆರೋಪಿಯು ಮಹಿಳೆಗೆ ವಿವರ ನೀಡಿದ್ದ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

‘ಉದ್ಯೋಗ ಸಿಗುವ ಆಶಾಭಾವನೆಯಲ್ಲಿ ಮಹಿಳೆಯು ಚಿನ್ನಾಭರಣ ಅಡವಿಟ್ಟು ₹ 1 ಲಕ್ಷ ನಗದನ್ನು ನೇರವಾಗಿ ಹಾಗೂ ₹ 1 ಲಕ್ಷ ನೆಫ್ಟ್ ಮೂಲಕ ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಪಾವತಿಸಿದ್ದರು. ನಂತರ ಆರೋಪಿಯು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯದಿರುವುದು ಮಹಿಳೆಯ ಗಮನಕ್ಕೆ ಬಂದಿದೆ. ಹಣ ವಾಪಸ್ ಮಾಡುವಂತೆ ಕೇಳಿದಾಗ ಆ ವ್ಯಕ್ತಿ ನೀಡಿಲ್ಲ ಎಂದು ಮಹಿಳೆ ದೂರು ನೀಡಿದ್ದರು ಎಂದು ಕಮಿಷನರ್ ಮಾಹಿತಿ ನೀಡಿದರು.

ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಯಿಂದ ವಂಚನೆಗೊಳಗಾದ ಮತ್ತಿಬ್ಬರು ಸಂತ್ರಸ್ತರು ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಮಾಹಿತಿಗೆ ಮನವಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ವಿದೇಶಾಂಗ ವ್ಯವಹಾರ ಸಚಿವಾಲಯದ ಅಂಗ ಸಂಸ್ಥೆ ವಲಸಿಗರ ರಕ್ಷಕ ಸಂಸ್ಥೆಯಿಂದ (Protector of Emigrants-POE) ವಿದೇಶಿ ಉದ್ಯೋಗ ನೇಮಕಾತಿ ಏಜನ್ಸಿಗಳ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿದೆ. ಯಥಾವತ್ ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ವಿದೇಶಿ ಉದ್ಯೋಗದ ಆಮಿಷವೊಡ್ಡಿ, ಅಂತಹವರಿಂದ ವಂಚನೆ ಆಗಿದ್ದರೆ, ನೇರವಾಗಿ ಪೊಲೀಸರಿಗೆ ದೂರು ನೀಡಬಹುದು ಎಂದು ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT