ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ಕಲಿಕೆಗೆ ನಿರ್ಭೀತ ವಾತಾವರಣ: ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯ
Published 24 ಮಾರ್ಚ್ 2024, 22:52 IST
Last Updated 24 ಮಾರ್ಚ್ 2024, 22:52 IST
ಅಕ್ಷರ ಗಾತ್ರ

ಮಂಗಳೂರು: ‘ಶಾಲಾ ಕಾಲೇಜುಗಳಿಗೆ ಹೆಣ್ಣುಮಕ್ಕಳು ನಿರ್ಭೀತಿಯಿಂದ ಹೋಗುವ ಮತ್ತು ಕಲಿಯಲು ಸಾಧ್ಯವಾಗುವಂಥ ವಾತಾವರಣ ನಿರ್ಮಿಸಲು ಸರ್ಕಾರ ಮುಂದಾಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.

ನಗರದಲ್ಲಿ ಭಾನುವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಮಂಡಿಸಿದ ಪರಿಷತ್ತು ಜಿಲ್ಲಾ ಘಟಕದ ಕೋಶಾಧ್ಯಕ್ಷ ಬಿ.ಐತಪ್ಪ ನಾಯ್ಕ್‌, ‘ಈಚೆಗೆ ಪುತ್ತೂರಿನ ಕಾಲೇಜೊಂದರಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಸಾಹಿತ್ಯ ಪರಿಷತ್ತು ಈ ಆಗ್ರಹವನ್ನು ಮುಂದಿಟ್ಟಿದೆ’ ಎಂದರು.  

ಪಿಯುಸಿ ಕಲಾ ವಿಭಾಗದಲ್ಲಿ ಕನ್ನಡ ಐಚ್ಛಿಕ ವಿಷಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು, ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯ ಅಧ್ಯಯನ ಮಾಡುವವರಿಗೆ ವಿದ್ಯಾರ್ಥಿ ವೇತನ ನೀಡಬೇಕು, ಶತಮಾನದ ಇತಿಹಾಸ ಇರುವ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಗುಣಮಟ್ಟ ಹೆಚ್ಚಿಸಲು ಮುಂದಾಗಬೇಕು ಎಂಬ ನಿರ್ಣಯಗಳನ್ನು ಕೂಡ ಮಂಡಿಸಲಾಯಿತು.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವೇ ಪ್ರಥಮ ಭಾಷೆ ಆಗಬೇಕು. ಇಂಗ್ಲಿಷ್ ಅಥವಾ ಭಾರತದ ಬೇರೆ ಯಾವುದೇ ಭಾಷೆಯನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಸಿದರೆ ಸಾಕು. ಆಂಗ್ಲಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಪ್ರಥಮ ಭಾಷೆ ಆಗಬೇಕು, ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ನೀಡಬೇಕು, ಖಾಸಗಿ ಗ್ರಂಥಾಲಯಗಳ ಪುನಶ್ಚೇತನ ಆಗಬೇಕು, ಶುದ್ಧ ಕನ್ನಡ ಭಾಷೆ ಬಳಕೆಗೆ ಆದ್ಯತೆ ನೀಡಬೇಕು, ಪುಸ್ತಕ ಮಾರಾಟಕ್ಕೆ ಸರ್ಕಾರ ಪ್ರತ್ಯೇಕ ಶಾಖೆ ಆರಂಭಿಸಬೇಕು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಲು ಕ್ರಮ ಕೈಗೊಳ್ಳಬೇಕು– ಇವು ಸಮ್ಮೇಳನದ ಇತರ ನಿರ್ಣಯಗಳು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT