ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಏಳಿಗೆಯಲ್ಲಿ ಗ್ಯಾರೇಜ್‌ ಪಾತ್ರ ಮಹತ್ವದ್ದು: ವಿದ್ಯಾಪ್ರಸನ್ನ ತೀರ್ಥ

ಗ್ಯಾರೇಜ್ ಮಾಲೀಕರ ಹಾಗೂ ನೌಕರರ ಮಹಾ ಸಮಾವೇಶದಲ್ಲಿ ವಿದ್ಯಾಪ್ರಸನ್ನ ತೀರ್ಥ
Last Updated 30 ಜನವರಿ 2023, 15:50 IST
ಅಕ್ಷರ ಗಾತ್ರ

ಮಂಗಳೂರು: ‘ಯಾಂತ್ರಿಕ ಯುಗದಲ್ಲಿ ನಾವಿದ್ದೇವೆ. ಈ ಕಾಲಘಟ್ಟದಲ್ಲಿ ದೇಶದ ಏಳಿಗೆಗೆ ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರ ಪಾತ್ರ ಹಿರಿದಾದುದು’ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಮತ್ತು ಕಾರ್ಮಿಕ ಸಂಘವು ಇಲ್ಲಿ ಸೋಮವಾರ ಏರ್ಪಡಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ಯಾರೇಜ್ ಮಾಲೀಕರು ಹಾಗೂ ನೌಕರರ ಮಹಾ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

‘ಆಪತ್ತು ಎದುರಾದಾಗ ಗ್ಯಾರೇಜ್‌ನವರು ಸಕಾಲದಲ್ಲಿ ಸೇವೆಗೆ ಲಭ್ಯರಾಗುತ್ತಾರೆ. ಅನುಕ್ಷಣವೂ ಸಮಾಜದ ಇತರರ ಸಂಕಷ್ಟ ನಿವಾರಿಸುವುದರಲ್ಲಿ ತೊಡಗಿಕೊಂಡಿರುತ್ತಾರೆ. ಅವರ ಸೇವೆ ಸ್ಮರಣೀಯವಾದುದು’ ಎಂದರು.

‘ದೇಶದ ಬೆನ್ನೆಲುಬಿನಂತಿರುವ ರೈತರ ಹಾಗೆ ಗ್ಯಾರೇಜ್‌ಗಳಲ್ಲಿ ದುಡಿವವರ ಸೇವೆಯೂ ಪ್ರಮುಖವಾದುದು. ಮತ್ತಷ್ಟು ಸಂಘಟಿತಗೊಳಳುವ ಮೂಲಕ ಅವರು ಇತರ ಕಾರ್ಮಿಕ ವರ್ಗಕ್ಕೆ ಹಾಗೂ ಸಮಾಜದ ದುರ್ಬಲರಿಗೆ ಧ್ವನಿಯಾಗಬೇಕು. ಇನ್ನಷ್ಟು ಉತ್ಕೃಷ್ಟ ಸೇವೆ ಒದಗಿಸಬೇಕು' ಎಂಬ ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್, ‘ಗ್ಯಾರೇಜ್ ಮಾಲೀಕರ ಸಂಘದ ಜಿಲ್ಲಾ ಕಟ್ಟಡಕ್ಕೆ ₹ 20ಲಕ್ಷ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಮತ್ತೆ ₹ 5 ಲಕ್ಷ ಬಿಡುಗಡೆ ಮಾಡುತ್ತೇನೆ’ ಎಂದರು.

ಸಂಘದ ನಿರ್ದೇಶಕ ಎ. ಜನಾರ್ದನ್, ಸಂಘ ಸ್ಥಾಪನೆಯ ಉದ್ದೇಶ ಹಾಗೂ ಮುಂದಿನ ಯೋಜನೆಗಳನ್ನು ವಿವರಿಸಿದರು.
ಮೇಯರ್ ಜಯಾನಂದ ಅಂಚನ್, ಶಾಸಕ ಯು.ಟಿ. ಖಾದರ್, ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರಾದ ದಿವಾಕರ್, ಶೈಲೇಶ್ ಶೆಟ್ಟಿ, ಭರತ್ ಎಸ್., ಮಂಗಳೂರು ಪೊಲೀಸ್‌ ಕಮಿಷನರ್ ಎನ್. ಶಶಿಕುಮಾರ್, ಐಒಸಿಎಲ್ ಹಿರಿಯ ಪ್ರಬಂಧಕ ವೈಭವ್ ಚಂದ್ರನ್, ಅರವಿಂದ್ ಮೋಟಾರ್ಸ್‌ ಸಂಸ್ಥೆಯ ಆಡಳಿತ ನಿರ್ದೇಶಕ ಆರೂರು ಕಿಶೋರ್ ರಾವ್, ರಮಾನಾಥ್ ಟ್ರೇಡಿಂಗ್ ಕಾರ್ಪೊರೇಷನ್‍ನ ಪ್ರಸನ್ನ ಕೆ.ಆರ್., ಐಒಸಿಎಲ್ ಮಂಗಳೂರು ಘಟಕದ ಮಾರುಕಟ್ಟೆ ಅಧಿಕಾರಿ ಪಂಕಜ್ ಕುಮಾರ್, ಸಮ್ಮೇಳನದ ಪ್ರಧಾನ ಸಂಚಾಲಕ ದಿವಾಕರ್ ಎಂ., ಸಂಘದ ಅಧ್ಯಕ್ಷ ಕೇಶವ, ಖಜಾಂಚಿ ರಾಜ್‍ಗೋಪಾಲ್, ಸಹಸಂಚಾಲಕ ದಿನೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸತೀಶ್ ಗಟ್ಟಿ ಇದ್ದರು.
ಸಂಘದ ಕಾರ್ಯದರ್ಶಿ ಪುರುಷೋತ್ತಮ ಕಮಿಲ ಸ್ವಾಗತಿಸಿದರು. ಸುಧಾಕರ್ ರಾವ್ ಪೇಜಾವರ ಮತ್ತು ವಾಸುದೇವ ರಾವ್ ಕುಡುಪು ನಿರೂಪಿಸಿದರು. ಸಮಿತಿ ಸದಸ್ಯ ಮಾಧವ ಬಂಗೇರ ಧನ್ಯವಾದ ಅರ್ಪಿಸಿದರು.

‘ಕಾಲಕ್ಕೆ ತಕ್ಕ ತಂತ್ರಜ್ಞಾನ ಬಳಸಿ’

‘ಗ್ಯಾರೇಜ್‌ ಕ್ಷೇತ್ರದಲ್ಲಿ ಸ್ವಂತ ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ. ಕಾಲಕ್ಕೆ ತಕ್ಕ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯಮ ಬೆಳೆಯಬೇಕು. ಗ್ಯಾರೇಜ್‍ನಲ್ಲಿರುವವರಿಗೆ ಸರ್ಕಾರದಿಂದ ಸಿಗುವ ಸಂಘಟಿತ-ಅಸಂಘಟಿತ ಕಾರ್ಮಿಕರ ಪ್ರಯೋಜನ ಸಿಗುವಂತಾಗಬೇಕು. ಅದಕ್ಕೆ ಮಾಲೀಕರು, ಕಾರ್ಮಿಕರ ಸಂಘ ಪೂರಕವಾಗಿ ಕೆಲಸ ಮಾಡಬೇಕಿದೆ’ ಎಂದು ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ.ಫಾ. ಫ್ರಾನ್ಸಿಸ್ ಡೇವಿಯರ್ ಗೋನ್ಸ್ ಹೇಳಿದರು.

ಬಲ್ಮಠದಿಂದ ಪುರಭವನಕ್ಕೆ ಜಾಥಾ

ಮಹಾ ಸಮಾವೇಶಕ್ಕೆ ಮುನ್ನ ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರ ಭಾರಿ ಜಾಥಾ ಬಲ್ಮಠ ಯುಬಿಎಮ್ ಮೈದಾನದಿಂದ ಪುರಭವನದವರೆಗೆ ನಡೆಯಿತು. ಗ್ಯಾರೇಜ್‌ ಕಾರ್ಮಿಕರಿಗೆ ವೃತ್ತಿಪರ ಅಗತ್ಯಗಳ ತಿಳಿವಳಿಕೆ ಮೂಡಿಸಲು ವಿಶೇಷ ಉಪನ್ಯಾಸ ಹಾಗೂ ಸಂವಾದ ಏರ್ಪಡಿಸಲಾಯಿತು. ‘ತೆಲಿಕೆ ಬಂಜಿ ನಿಲಿಕೆ’ ಮನೋರಂಜನಾ ಕಾರ್ಯಕ್ರಮ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT