ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಕುಲ ಮಾದರಿ ಅಂಗನವಾಡಿ ಆರಂಭಕ್ಕೆ ಆಗ್ರಹ: ಧರ್ಮ ಸಂಸತ್‌ನಲ್ಲಿ ನಿರ್ಣಯ

ಕನ್ಯಾಡಿಯಲ್ಲಿ ಸಾಧು, ಸಂತರಿಂದ ಅಭಿಮತ
Last Updated 3 ಸೆಪ್ಟೆಂಬರ್ 2018, 14:06 IST
ಅಕ್ಷರ ಗಾತ್ರ

ಕನ್ಯಾಡಿ (ದಕ್ಷಿಣ ಕನ್ನಡ): ಮೆಕಾಲೆ ಶಿಕ್ಷಣ ನೀತಿಯನ್ನು ಕೈಬಿಟ್ಟು, ಸನಾತನ ಧರ್ಮದ ನೆಲೆಗಟ್ಟಿನಲ್ಲಿ ದೇಶದ ಎಲ್ಲ ಹಳ್ಳಿಗಳಲ್ಲಿ ಗುರುಕುಲ ಮಾದರಿಯ ಅಂಗನವಾಡಿಗಳನ್ನು ಮುಂದಿನ ಹತ್ತು ವರ್ಷಗಳೊಳಗೆ ಪ್ರಾರಂಭಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸುವ ನಿರ್ಣಯವನ್ನು ಸೋಮವಾರ ಇಲ್ಲಿ ನಡೆದ ರಾಷ್ಟ್ರೀಯ ಧರ್ಮ ಸಂಸತ್‌ನಲ್ಲಿ ಕೈಗೊಳ್ಳಲಾಯಿತು.

ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವದ ಅಂಗವಾಗಿ ನಿತ್ಯಾನಂದ ಸರಸ್ವತಿ ಸ್ವಾಮೀಜಿ ವೇದಿಕೆಯಲ್ಲಿ ನಡೆದ ರಾಷ್ಟ್ರೀಯ ಧರ್ಮ ಸಂಸತ್‌– 2018ರಲ್ಲಿ ಭಾಗವಹಿಸಿದ್ದ ದೇಶದ ವಿವಿಧೆಡೆಯ, ವಿವಿಧ ಪಂಥ, ಪರಂಪರೆ, ಅಖಾಡಗಳ ಸಾಧು ಸಂತರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡರು.

‘ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಬೋಧಿಸಬೇಕು. ವೇದ, ಉಪನಿಷತ್‌ ಸೇರಿದಂತೆ ಸನಾತನ ಧರ್ಮದ ಪ್ರಮುಖ ಗ್ರಂಥಗಳ ಮಹತ್ವದ ಭಾಗಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳಿಗೆ ಕಲಿಸಬೇಕು. ಬ್ರಿಟೀಷರು, ಮೊಘಲರ ಕಾಲದಲ್ಲಿ ರಚಿಸಿದ ಹಾಗೂ ವಿದೇಶಿಯರು ದಾಖಲಿಸಿದ ಇತಿಹಾಸ ಬೋಧನೆ ನಿಲ್ಲಿಸಬೇಕು. ವಿದೇಶಗಳ ಇತಿಹಾಸ ಕಲಿಕೆಯನ್ನೂ ಸ್ಥಗಿತಗೊಳಿಸಬೇಕು’ ಎಂಬ ಒತ್ತಾಯ ನಿರ್ಣಯದಲ್ಲಿದೆ.

ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ಪಕ್ಷಭೇದ ಮರೆತು ಗುರುಕುಲ ಮಾದರಿ ಅಂಗನವಾಡಿಗಳ ಆರಂಭಕ್ಕೆ ಮುಂದಾಗಬೇಕು. ಆ ಮೂಲಕ ಸನಾತನ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು. ದೈನಂದಿನ ಬದುಕಿಗೆ ಬಳಕೆಯಾಗುವ ಸಂವಿಧಾನಾತ್ಮಕ ಕಾನೂನುಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು. ಸಾಧುಗಳು ಮತ್ತು ಸಂತರಿಗೆ ಜೀವನ ಭದ್ರತೆ ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಗ್ಗೂಡಿ ‘ಸಂತರ ಕಲ್ಯಾಣ ನಿಧಿ’ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನೂ ಧರ್ಮ ಸಂಸತ್‌ ಮುಂದಿಟ್ಟಿದೆ.

ಧರ್ಮ ಸಂಸತ್‌ನ ನಿರ್ಣಯಗಳನ್ನು ಸಾಕಾರಗೊಳಿಸುವುದಕ್ಕಾಗಿ ದೇಶದ ಎಲ್ಲ ಅಖಾಡಗಳು, ಪರಂಪರೆಗಳು, ಪಂಥಗಳು, ಬೈರಾಗಿಗಳು, ನಾಗಾ ಸಾಧುಗಳನ್ನು ಒಳಗೊಂಡ ‘ರಾಷ್ಟ್ರೀಯ ಲೋಕಕಲ್ಯಾಣ ಮಂಚ್‌’ ಸಂಬ ಧಾರ್ಮಿಕ ಸಂಘಟನೆಯನ್ನು ಅಸ್ತಿತ್ವಕ್ಕೆ ತರುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

‘2 ಕೋಟಿ ಸಂತರು ಒಟ್ಟಿಗಿದ್ದೇವೆ’: ಧರ್ಮ ಸಂಸತ್‌ ಉದ್ಘಾಟನಾ ಸಮಾರಂಭದ ಅಂತ್ಯದಲ್ಲಿ ಮಾತನಾಡಿದ ಬ್ರಹ್ಮಾನಂದ ಸ್ವಾಮೀಜಿ, ‘ದೇಶ ಈಗ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಮೆಕಾಲೆ ಶಿಕ್ಷಣ ಪದ್ಧತಿಯೇ ಕಾರಣ. ಬ್ರಿಟೀಷರು, ಮೊಘಲರು, ವಿದೇಶಿಯರು ದಾಖಲಿಸಿದ ಇತಿಹಾಸದಲ್ಲಿ ಯಾವ ಜೀವನ ಮೌಲ್ಯ ಇದೆ? ಚೀನಾ, ಫ್ರಾನ್ಸ್‌, ಬ್ರಿಟನ್‌, ಜರ್ಮನಿ, ರಷ್ಯಾ ಕ್ರಾಂತಿಗಳ ಕುರಿತು ಅಧ್ಯಯನ ಮಾಡಿ ನಮ್ಮ ಮಕ್ಕಳು ಏನು ಕಲಿಯಲು ಸಾಧ್ಯವಿದೆ’ ಎಂದು ಪ್ರಶ್ನಿಸಿದರು.

ಪಾಶ್ಚಿಮಾತ್ಯರ ಇತಿಹಾಸದ ಬಗ್ಗೆ ಕೆಲವು ರಾಜಕೀಯ ನೇತಾರರಿಗೆ ಒಲವು ಇರಬಹುದು. ಆದರೆ, ಸಂತರಿಗೆ ಒಲವು ಇಲ್ಲ. ಧರ್ಮ ಮತ್ತು ದೇಶದ ಎಲ್ಲ ಜನರ ಬದುಕಿನ ಭವಿಷ್ಯವನ್ನು ನಿರ್ಧರಿಸುವವರು ತಾವೇ ಎಂಬ ಧೋರಣೆ ರಾಜಕಾರಣಿಗಳಲ್ಲಿ ಇದೆ. ಅವರವರ ಸಿದ್ಧಾಂತ ಬೆಂಬಲಿಸಿಕೊಂಡೇ ವಾಗ್ವಾದಕ್ಕೆ ಇಳಿಯುತ್ತಾರೆ. ಈ ವಿಚಾರದಲ್ಲಿ ದೇಶದಲ್ಲಿರುವ ಎರಡು ಕೋಟಿ ಸಾಧು, ಸಂತರು ಸೇರಿ ಹೋರಾಟಕ್ಕೆ ಇಳಿಯಲು ಸಿದ್ಧ ಎಂದರು.

ಧರ್ಮ ಸಂಸತ್‌ ಉದ್ಘಾಟಿಸಿ ಮಾತನಾಡಿದ ಹರಿದ್ವಾರದ ಜುನಾ ಅಖಾಡದ ಮಹಾಮಂಡಲೇಶ್ವರ ದೇವಾನಂದ ಸರಸ್ವತಿ ಸ್ವಾಮೀಜಿ, ‘ಭಾರತದ ಶಿಕ್ಷಣ ವ್ಯವಸ್ಥೆಯನ್ನು ಶುದ್ಧೀಕರಿಸುವ ಕೆಲಸ ಆಗಬೇಕು. ಇದಕ್ಕಾಗಿ ಸನಾತನ ಧರ್ಮದ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡುವ ಕೆಲಸ ಆರಂಭಿಸಬೇಕಿದೆ. ವೇದಿಕೆಯಲ್ಲಿ ವಿಚಾರ ಮಾಡಿದರೆ ಸಾಲದು. ಎಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ಕೆಲಸ ಮಾಡಬೇಕು. ಆ ಮೂಲಕ ಭಾರತದ ಯುವ ಪೀಳಿಗೆಯನ್ನು ರಕ್ಷಿಸಬೇಕು’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT