ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಗಳಲ್ಲಿ ಕುಂದುಕೊರತೆ ಸಭೆ ಕಡ್ಡಾಯ : ಹನುಮಂತರಾಯ

Last Updated 26 ಆಗಸ್ಟ್ 2018, 15:41 IST
ಅಕ್ಷರ ಗಾತ್ರ

ಮಂಗಳೂರು: ‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರ ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ ಮತ್ತು ಎಸ್‌ಟಿ) ಕುಂದುಕೊರತೆ ಸಭೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಸಭೆಯ ನಡಾವಳಿಯನ್ನು ಕಮಿಷನರ್‌ ಕಚೇರಿಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ’ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದರು.

ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ನಡೆದ ಎಸ್‌ಸಿ ಮತ್ತು ಎಸ್‌ಟಿ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಯಾ ಠಾಣೆಗಳ ವ್ಯಾಪ್ತಿಯ ದಲಿತ ಮುಖಂಡರಿಗೆ ಸಭೆ ಕುರಿತು ಮುಂಚಿತವಾಗಿ ಮಾಹಿತಿ ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದರು.

ಕುಂದುಕೊರತೆ ಆಲಿಸುವುದು ನಿರ್ದಿಷ್ಟವಾದ ಸಭೆಗೆ ಸೀಮಿತವಾಗಿಲ್ಲ. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿಮಾಡಿ ದೂರು ನೀಡಬಹುದು. ಅಂತಹ ದೂರುಗಳಿಗೂ ತ್ವರಿತವಾಗಿ ಸ್ಪಂದಿಸಿ, ಪರಿಹಾರ ದೊರಕಿಸುವ ವ್ಯವಸ್ಥೆ ಇದೆ ಎಂದು ದಲಿತ ಮುಖಂಡರೊಬ್ಬರ ಆಕ್ಷೇಪಕ್ಕೆ ಉತ್ತರಿಸಿದರು.

ಕ್ರಮಕ್ಕೆ ಶಿಫಾರಸು:ಶಿವನಾಥನ್‌ ಎಂಬುವವರು ಪರಿಶಿಷ್ಟ ಜಾತಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದು, ಮೀಸಲಾತಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆಯಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆಯುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಜ್ಯೋತಿ ಎಂಬುವವರು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ‘ಶಿವನಾಥನ್‌ ಎಂವ ವ್ಯಕ್ತಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದು ತನಿಖೆ ವೇಳೆ ದೃಢಪಟ್ಟಿದೆ. ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಜಿಲ್ಲಾಧಿಕಾರಿಯವರೇ ಕ್ರಮ ಜರುಗಿಸಬೇಕಿದೆ’ ಎಂದರು.

ಕಾವೂರು ಬಳಿ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ಡಿಸಿ ಮನ್ನಾ ಜಮೀನಿನಲ್ಲಿ ಮೊಸರು ಕುಡಿಕೆ ಉತ್ಸವ ನಡೆಸಲು ಅವಕಾಶ ನೀಡುತ್ತಿರುವುದಕ್ಕೆ ದಲಿತ ಮುಖಂಡ ಅಶೋಕ್ ಕೊಂಚಾಡಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅವರ ಬೇಡಿಕೆ ಸಮಂಜಸವಲ್ಲ ಎಂದ ಡಿಸಿಪಿ, ‘ತಾತ್ಕಾಲಿಕ ಕಾರ್ಯಕ್ರಮಗಳಿಗೆ ಜಾಗ ಬಳಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಯಾವುದೇ ಸಂಘಟನೆಗಳ ಅನುಮತಿ ಪಡೆಯಬೇಕಿಲ್ಲ. ಪೊಲೀಸ್‌ ಠಾಣೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು’ ಎಂದು ಉತ್ತರಿಸಿದರು. ಪರಿಶೀಲನೆ ನಡೆಸುವಂತೆ ಕಾವೂರು ಠಾಣೆ ಪೊಲೀಸರಿಗೆ ಸೂಚಿಸಿದರು.

2017ರ ಅಕ್ಟೋಬರ್‌ನಲ್ಲಿ ಮಹಾನಗರ ಪಾಲಿಕೆ ರಸ್ತೆಯ ಬದಿಯಲ್ಲಿ ತೋಡಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದ ದಲಿತ ಯುವಕನ ಕುಟುಂಬಕ್ಕೆ ಈವರೆಗೂ ಪರಿಹಾರ ವಿತರಿಸಿಲ್ಲ. ಯುವಕನ ತಂದೆ, ತಾಯಿ ಅನಾರೋಗ್ಯಕ್ಕೊಳಗಾಗಿದ್ದು, ಸಂಕಷ್ಟದಲ್ಲಿದ್ದಾರೆ ಎಂದು ದಲಿತ ಮುಖಂಡ ಎಸ್‌.ಪಿ.ಆನಂದ್ ಹೇಳಿದರು. ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಹಾಗೂ ವಿವಿಧ ಠಾಣೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT