ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ನೌಕರರಿಗೆ ‘ಸಿಬ್ಬಂದಿ ಮಿತ್ರ’ ಭರವಸೆ

ರಾಜ್ಯದಲ್ಲಿ ಮೊದಲ ಬಾರಿಗೆ ಪಾಲಿಕೆಯಲ್ಲಿ ಅನುಷ್ಠಾನ: ಮೇಯರ್
Published 4 ಜನವರಿ 2024, 2:30 IST
Last Updated 4 ಜನವರಿ 2024, 2:30 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ತನ್ನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾಯಂ ನೌಕರರು, ಪೌರ ಕಾರ್ಮಿಕರಿಗೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ‘ಸಿಬ್ಬಂದಿ ಮಿತ್ರ’ ಗುಂಪು ವಿಮೆ ಸೌಲಭ್ಯವನ್ನು ಒದಗಿಸಿದೆ.

ಮಂಗಳವಾರ ಪಾಲಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಆರೋಗ್ಯ ಕಾರ್ಡ್‌ ವಿತರಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 264 ಪೌರ ಕಾರ್ಮಿಕರಿಗೆ ಶೇ 24.1ರ ನಿಧಿ ಅಡಿಯಲ್ಲಿ ಐದು ವರ್ಷಗಳ ಹಿಂದೆಯೇ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸ್ತುತ ಬಾಕಿ ಉಳಿದಿರುವ 57 ಪೌರ ಕಾರ್ಮಿಕರು, ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 267 ಜನರಿಗೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ‘ಸಿಬ್ಬಂದಿ ಮಿತ್ರ’ ಯೋಜನೆಯಡಿ ವಿಮಾ ಸೌಲಭ್ಯ ವಿಸ್ತರಿಸಲಾಗಿದೆ. ಇದರ ವೆಚ್ಚ ₹20.25 ಲಕ್ಷ ಮೊತ್ತವನ್ನು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಡಿ ಭರಿಸಲಾಗುತ್ತಿದೆ. ‍ಈ ರೀತಿ ಯೋಜನೆ ಜಾರಿಗೊಳಿಸುತ್ತಿರುವ ಮೊದಲ ಮಹಾನಗರ ಪಾಲಿಕೆ ನಮ್ಮದು’ ಎಂದರು.

ಪಾಲಿಕೆ ಆಯುಕ್ತ ಆನಂದ್ ಎಲ್ ಮಾತನಾಡಿ, ‘ಮೊದಲ ಹಂತದಲ್ಲಿ ಕಚೇರಿಯ ಸಿಬ್ಬಂದಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಕುಟುಂಬ ಸದಸ್ಯರಿಗೆ ವಿಸ್ತರಿಸಲು ಕ್ರಮವಹಿಸಲಾಗುವುದು’ ಎಂದರು.

ಎಸ್‌ಬಿಐ ಹಿರಿಯ ವ್ಯವಸ್ಥಾಪಕ ಆದಿತ್ಯ ಮಾಹಿತಿ ನೀಡಿ, ‘ಸಿಬ್ಬಂದಿ ಮಿತ್ರ ವಿಮೆ ಯೋಜನೆಯು ವಿಮೆ ಮಾಡಿಸಿದ ಪ್ರಥಮ ದಿನದಿಂದಲೇ ಅನ್ವಯವಾಗುತ್ತದೆ. ಈ ಮೊದಲಿನಿಂದ ಕಾಯಿಲೆ ಹೊಂದಿದ್ದವರೂ ಇದರ ಸೌಲಭ್ಯ ಪಡೆಯಬಹುದು. ಆದರೆ, ಒಳರೋಗಿಯಾಗಿ ದಾಖಲಾದವರಿಗೆ ಮಾತ್ರ ವಿಮೆ ದೊರೆಯುತ್ತದೆ. ವಿಮೆಗೆ ₹ 5 ಲಕ್ಷದವರೆಗೆ ಕವರೇಜ್ ಇದ್ದು, ಚಿಕಿತ್ಸೆ ವೆಚ್ಚದ ಜೊತೆಗೆ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯು ದಿನಕ್ಕೆ ಕೊಠಡಿ ಬಾಡಿಗೆ ₹15 ಸಾವಿರದವರೆಗೆ, ಐಸಿಯುದಲ್ಲಿದ್ದರೆ ₹20 ಸಾವಿರದವರೆಗೆ ಕ್ಲೇಮ್ ಮಾಡಬಹುದು. ನಗದುರಹಿತ ವ್ಯವಸ್ಥೆ ಇಲ್ಲದ ಆಸ್ಪತ್ರೆಗೆ ದಾಖಲಾಗಿದ್ದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ 20 ದಿನಗಳೊಳಗೆ ಬಿಲ್ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಇಲ್ಲಿಂದ ವರ್ಗಾವಣೆಯಾದವರ ಹೆಸರನ್ನು ಕಡಿತಗೊಳಿಸಿ, ಹೊಸದಾಗಿ ಬಂದವರ ಹೆಸರು ಸೇರ್ಪಡೆಗೂ ಅವಕಾಶ ಇದೆ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವವರು ಮಾತ್ರ ಇದರ ಪ್ರಯೋಜನ ಪಡೆಯಬಹುದು’ ಎಂದರು.

ಚೀಫ್ ಮ್ಯಾನೇಜರ್ ಗುರುಪ್ರಸಾದ್ ಕಾಮತ್ ಅವರು ಸ್ಟೇಟ್‌ ಬ್ಯಾಂಕ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಉಪ ಮೇಯರ್ ಸುನೀತಾ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್‌ ಕುಮಾರ್, ಲೋಹಿತ್ ಅಮೀನ್, ಗಣೇಶ್ ಕುಲಾಲ್, ಸದಸ್ಯ ಶಶಿಧರ್ ಹೆಗ್ಡೆ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT