ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಾರೋಹಣ ಕುಟುಂಬದ ಸಂಭ್ರಮವಾಗಲಿ

‘ಹರ್ ಘರ್ ತಿರಂಗಾ’ ಅಭಿಯಾನ; ಜಿಲ್ಲೆಯಲ್ಲಿ 6 ಲಕ್ಷ ಧ್ವಜ– ಸಚಿವ ಸುನಿಲ್‌ ಕುಮಾರ್
Last Updated 6 ಆಗಸ್ಟ್ 2022, 11:43 IST
ಅಕ್ಷರ ಗಾತ್ರ

ಮಂಗಳೂರು: ‘ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಸಂಭ್ರಮ ಸರ್ಕಾರಿ ಕಾರ್ಯಕ್ರಮವಾಗಿರದೆ, ನಾಗರಿಕರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಬೇಕು. ಕುಟುಂಬದ ಎಲ್ಲ ಸದಸ್ಯರು ಸೇರಿ ಮನೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಸಲಹೆ ಮಾಡಿದರು.

ಭಾರತ ಸ್ವಾತಂತ್ರ್ಯದ ಅಮೃತ ವರ್ಷಾಚರಣೆ ಅಂಗವಾಗಿ ಆ.13ರಿಂದ 15ರವರೆಗೆ ನಡೆಯಲಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ಪೂರ್ವ ಸಿದ್ಧತೆ ಕುರಿತು ಚರ್ಚಿಸಲು ಶನಿವಾರ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿದೆ. ಒಂದು ದಿನದ ಹೋರಾಟ ಅಥವಾ ಒಂದು ದಿನದ ಉಪವಾಸದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿಲ್ಲ. ಸಾವಿರಾರು ಜನರ ಬಲಿದಾನ ಇದರ ಹಿಂದಿದೆ. ಈ ಪ್ರಜ್ಞೆಯನ್ನು ಬಿತ್ತಲು ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದಡಿ ಜಿಲ್ಲೆಯ ಎಲ್ಲ ಕಚೇರಿಗಳು, ಮನೆಗಳು ಸೇರಿ ಆರು ಲಕ್ಷ ಧ್ವಜಗಳನ್ನು ಹಾರಿಸಲು ಸಿದ್ಧತೆ ನಡೆಸಲಾಗಿದೆ. ಜನರು ಸ್ವಂತ ಹಣದಲ್ಲಿ ಧ್ವಜವನ್ನು ಖರೀದಿಸಿ ರಾಷ್ಟ್ರಪ್ರೇಮ ಅಭಿವ್ಯಕ್ತಿಸಬೇಕು’ ಎಂದರು.

‘ಆ.8 ಮತ್ತು 9ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಾರ್ಡ್‌ ಸಭೆಗಳನ್ನು ನಡೆಸಬೇಕು. ಆ.10 ಮತ್ತು 11ರಂದು ಎಲ್ಲ ಮನೆಗಳಿಗೆ ಧ್ವಜಗಳನ್ನು ವಿತರಿಸಬೇಕು. ಆ.13ರಂದು ಎಲ್ಲರ ಮನೆ, ಕಟ್ಟಡ, ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ಧ್ವಜಾರೋಹಣ ನಡೆಯಲಿ. ಧ್ವಜಕ್ಕೆ ಅಪಮಾನವಾಗದಂತೆ ಎಚ್ಚರ ವಹಿಸಬೇಕು. ಆ.14ರಂದು ಧ್ವಜ ಅವರೋಹಣ ಮಾಡಿ, ಮತ್ತೆ ಆ.15ರಂದು ಧ್ವಜಾರೋಹಣ ಮಾಡಲು ಕೂಡ ಅವಕಾಶವಿದೆ’ ಎಂದು ತಿಳಿಸಿದರು.

1857ರ ಸಿಪಾಯಿ ದಂಗೆಗೂ ಮೊದಲೇ 1837ರಲ್ಲಿ ಸುಳ್ಯದಲ್ಲಿ ಬ್ರಿಟಿಷರ ವಿರುದ್ಧ ರೈತರ ಕ್ರಾಂತಿ ನಡೆದ ಇತಿಹಾಸ ಇದೆ. ಇದು ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಗಿದೆ. ಹೀಗಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ರೈತ ದಂಗೆ ನಡೆದ ಸುಳ್ಯ, ಮಂಗಳೂರಿನ ಬಾವುಟಗುಡ್ಡೆ ಮತ್ತು ರೈತ ಹೋರಾಟಗಾರರನ್ನು ನೇಣಿಗೆ ಹಾಕಿದ ಬಿಕರ್ನಕಟ್ಟೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಹರಿದ ಅಥವಾ ಮಾಸಿದ ಧ್ವಜಗಳನ್ನು ಆರೋಹಣ ಮಾಡಬಾರದು. ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಧ್ವಜಗಳು ಗಾಳಿ, ಮಳೆಗೆ ಹರಿಯದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಎಚ್ಚರಿಸಿದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಳಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಉಪವಿಭಾಗಾಧಿಕಾರಿ ಮದನಮೋಹನ್, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್
ಇದ್ದರು.

ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳು ತಯಾರಿಸಿರುವ ಧ್ವಜಗಳ ಪ್ರದರ್ಶನ ಮತ್ತು ಮಾರಾಟ ಕೇಂದ್ರವನ್ನು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸಂಚಾರಿ ನಿಯಂತ್ರಕ ಮರಿ ಗೌಡ ಇದ್ದರು.

‘ವಾಹನಕ್ಕೆ ಧ್ವಜ ಹಾಕುವಂತಿಲ್ಲ’

ಕೇಂದ್ರ ಸರ್ಕಾರದಿಂದ 1.75 ಲಕ್ಷ ಧ್ವಜಗಳು ಬಂದಿದ್ದು, ಇದಕ್ಕೆ ₹ 22, ರಾಜ್ಯ ಸರ್ಕಾರದಿಂದ ಬಂದಿರುವ ಧ್ವಜಗಳಿಗೆ ₹ 25, ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳು ತಯಾರಿಸಿರುವ ಪಾಲಿಸ್ಟರ್ ಧ್ವಜಕ್ಕೆ ₹ 30, ಬಟ್ಟೆಯ ಧ್ವಜಕ್ಕೆ ₹ 35 ದರ ನಿಗದಿಯಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ 16 ಕಡೆಗಳಲ್ಲಿ ಧ್ವಜ ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಸ್ವಂತ ನಿಧಿಯ ಹಣ ಬಳಕೆ ಮಾಡಿ 500 ಧ್ವಜ ಖರೀದಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ನಗರ ಪಾಲಿಕೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಹೊರತುಪಡಿಸಿ, ಸುಮಾರು 1.60 ಲಕ್ಷ ಮನೆಗಳು ಇವೆ. ಗ್ರಾಮೀಣ ಭಾಗದಲ್ಲಿ 2.90 ಲಕ್ಷ ಮನೆಗಳು ಇದ್ದು, ಸರ್ಕಾರಿ ಕಚೇರಿ, ಇತರ ಕಟ್ಟಡಗಳು ಸೇರಿ 4.60 ಲಕ್ಷ ಮನೆಗಳು ಇವೆ. ಸ್ತ್ರೀಶಕ್ತಿ ಗುಂಪುಗಳ ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ತರಬೇತಿ ನೀಡಿದ್ದು, 1.50 ಲಕ್ಷ ಧ್ವಜಗಳು ಸಿದ್ಧವಾಗಿವೆ. ಇನ್ನೂ 1 ಲಕ್ಷ ಧ್ವಜ ಸಿದ್ಧವಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT