ಭಾನುವಾರ, ಮಾರ್ಚ್ 26, 2023
24 °C

‘ಪದ್ಮಶ್ರೀ’ ಹಿಡಿದು ಭಾವುಕರಾದ ಹರೇಕಳ ಹಾಜಬ್ಬ ಪ್ರತಿಕ್ರಿಯೆ ಹೀಗಿತ್ತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಸೋಮವಾರ ‘ಪದ್ಮಶ್ರೀ’ ಪ್ರಶಸ್ತಿ ಸ್ವೀಕರಿಸಿ, ತವರಿಗೆ ಮರಳಿದ ಅಕ್ಷರ ಸಂತ ಹರೇಕಳ ಹಾಜಬ್ಬ ಭಾವುಕರಾದರು.

‘ಒಬ್ಬ ಸಾಮಾನ್ಯ ಬಡ ವ್ಯಕ್ತಿ, ಒಂದು ಹಳ್ಳಿಯ ಮೂಲೆಯವನಾದ ನಾನು, ಜೀವಮಾನದಲ್ಲಿ ಹಿಂದೆಂದೂ ನೋಡಿರದ ಐಷಾರಾಮಿ ವ್ಯವಸ್ಥೆ, ಆತಿಥ್ಯ, ಸತ್ಕಾರವನ್ನು ಕಂಡೆ’ ಎಂದು ಕನವರಿಸಿದರು.

ಮಂಗಳವಾರ ಬೆಳಿಗ್ಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಧಿಕಾರಿಗಳು ಬರಮಾಡಿಕೊಂಡರು. ‘ಪದ್ಮಶ್ರೀ’ ಸ್ವೀಕರಿಸಿ ಬಂದ ತಮ್ಮೂರಿನ ಶಿಕ್ಷಣ ಕ್ರಾಂತಿಯ ಹರಿಕಾರನನ್ನು ಸ್ವಾಗತಿಸಲು ಊರವರು ವಿಮಾನ ನಿಲ್ದಾಣದ ಹೊರಗೆ ಕಾದು ನಿಂತಿದ್ದರು. ಸಾಲುಗಟ್ಟಿ ನಿಂತಿರುವ ಜನರನ್ನು ಕಂಡು ಗಲಿಬಿಲಿಗೊಂಡ ಹಾಜಬ್ಬ ಅವರು, ‘ನನಗೆ ಸನ್ಮಾನ ಬೇಡ’ ಎನ್ನುತ್ತ ಸರಸರನೆ ನಡೆದು, ವಾಹನದಲ್ಲಿ ಕುಳಿತರು. ತೀರಾ ಸರಳ ವ್ಯಕ್ತಿತ್ವದ ಹಾಜಬ್ಬ ಅವರಿಗೆ ಸನ್ಮಾನ ಸ್ವೀಕರಿಸುವುದು ಮುಜುಗರದ ಸಂಗತಿಯಾಗಿತ್ತು.

ಓದಿ: Padma Awards|ಅಕ್ಷರ ಸಂತ ಹರೇಕಳ ಹಾಜಬ್ಬಗೆ ರಾಷ್ಟ್ರಪತಿಗಳಿಂದ ಪದ್ಮಶ್ರಿ ಪ್ರದಾನ

ಅಲ್ಲಿಂದ ಅವರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಹಾಜಬ್ಬ ಅವರನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಶಾಲು ಹೊದೆಸಿ ಅವರನ್ನು ಸನ್ಮಾನಿಸಿದರು. ಭಾವೋದ್ವೇಗಕ್ಕೆ ಒಳಗಾಗಿದ್ದ ಹಾಜಬ್ಬ, ಕುರ್ಚಿಯಲ್ಲಿ ಕುಳಿತುಕೊಳ್ಳಲು ವಿನಂತಿಸಿದರೂ, ನಿಂತೇ ಮಾತನಾಡುತ್ತಿದ್ದರು. ಅಲ್ಲಿದ್ದವರೆಲ್ಲ ಒತ್ತಾಯ ಮಾಡಿ, ಸರಳತೆಯ ಸಾಕಾರಮೂರ್ತಿಯಂತಿರುವ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿದರು.

‘130 ಕೋಟಿ ಜನಸಂಖ್ಯೆ ಇರುವ ದೇಶದ ಪ್ರಧಾನಮಂತ್ರಿಯನ್ನು ನಾನು ಕೇವಲ ಆರು ಅಡಿ ಅಂತರದಲ್ಲಿ ನೋಡಿದೆ. ಅವರು ನನ್ನ ಸನಿಹ ಬಂದು ಕೈ ಮುಟ್ಟಿ ಮಾತನಾಡಿಸಿದರು. ಇದಕ್ಕಿಂತ ಬೇರೆ ಭಾಗ್ಯ ನನಗೆ ಬೇರೇನೂ ಇಲ್ಲ. ಮಂಗಳೂರಿನಿಂದ ಹೊರಟು, ದೆಹಲಿ ತಲುಪುವ ತನಕ ಮಾಡಿದ್ದ ವ್ಯವಸ್ಥೆ, ಅಲ್ಲಿ ನನ್ನನ್ನು ಸತ್ಕರಿಸಿದ ರೀತಿ, ನನ್ನ ಊಹೆಗೂ ನಿಲುಕದ್ದು. ಕಿತ್ತಳೆ ಹಣ್ಣು ಮಾರಾಟ ಮಾಡಿ, ಜೀವನ ನಡೆಸುತ್ತಿದ್ದ ನಾನು, ರಾಷ್ಟ್ರಪತಿ ಎದುರು ನಿಂತಿದ್ದನ್ನು ನನಗೇ ನಂಬಲಾಗುತ್ತಿರಲಿಲ್ಲ’ ಎನ್ನುವಾಗ ಹಾಜಬ್ಬ ಅವರ ಕಣ್ಣಾಲಿಗಳು ತೇವವಾಗಿದ್ದವು.

ಓದಿ: ಅಕ್ಷರ ಸಂತನಿಗೆ ದೇಶದ ಅತ್ಯುನ್ನತ ಗೌರವ

ಮಂಗಳೂರೇ ಪ್ರಪಂಚವಾಗಿದ್ದ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಹೋದಾಗ ನವದೆಹಲಿಯಲ್ಲಿ ಮಾಡಿದ್ದ ಐಷಾರಾಮಿ ವಸತಿ, ವೈಭವೋಪೇತ ಉಪಾಹಾರ, ಊಟದ ವ್ಯವಸ್ಥೆಯನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಮಾತಿನ ನಡುನಡುವೆ ಅದನ್ನೇ ಪುನರುಚ್ಚರಿಸುತ್ತಿದ್ದರು.

‘ನಮ್ಮೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಇದೆ. ಪದವಿಪೂರ್ವ ಕಾಲೇಜು ನಮ್ಮೂರಿನಲ್ಲಿ ಆಗಬೇಕು. ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ವಿನಂತಿಸಿಕೊಳ್ಳುವೆ’ ಎಂದು ಹಾಜಬ್ಬ ಹೇಳಿದರು.


ಹರೇಕಳ ಹಾಜಬ್ಬ

‘ಆರ್ಥಿಕ ಸಂಕಷ್ಟ ಇರುವ ನೀವು ಸರ್ಕಾರದ ಎದುರು ನಿಮ್ಮ ವೈಯಕ್ತಿಕ ಬೇಡಿಕೆಗಳನ್ನೇನಾದರೂ ಇಡುತ್ತೀರಾ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ‘ಪದ್ಮಶ್ರೀ’ಯಂತಹ ಗೌರವ ನೀಡಿ ಸನ್ಮಾನಿಸಿದ್ದಾರೆ. ನಾನೊಬ್ಬ ಸಾಮಾನ್ಯ ವ್ಯಕ್ತಿ, ಬಡವ, ಸಾಲ ಮಾಡಿ ಬದುಕಿದವನು. ನಾನು ಬೇರೇನನ್ನೂ ಹೇಳಲಾರೆ. ನನ್ನ ಊರಿನಲ್ಲಿ ಪದವಿಪೂರ್ವ ಕಾಲೇಜು ಆಗಬೇಕು. ಅದಕ್ಕೆ ಸರ್ಕಾರ ನೆರವು ನೀಡಬೇಕು’ ಎಂದರು.

ಹಾಜಬ್ಬ ಅವರ ಬೇಡಿಕೆಯಂತೆ ಹರೇಕಳದಲ್ಲಿ ಪದವಿಪೂರ್ವ ಕಾಲೇಜಿನ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಹಾಜಬ್ಬ ಅವರಿಗೆ ಮುಂದಿನ ದಿನಗಳಲ್ಲಿ, ದೊಡ್ಡ ಕಾರ್ಯಕ್ರಮ ನಡೆಸಿ, ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.

ಕೈಗೆ ಗಾಯ ಆಗಿದ್ದು ಹೇಗೆ?: ‘ಹಾಜಬ್ಬ ಎಡಗೈ ಹೆಬ್ಬೆರಳಿಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರು. ‘ನಾನು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದೆ. ಇದೇ ಕೈಯನ್ನು ದೇಶದ ಪ್ರಧಾನಮಂತ್ರಿ ಮುಟ್ಟಿದರು. ಅದು ನನಗೆ ಅಪೂರ್ವ ಕ್ಷಣ. ನನಗೆ ಭಾಷೆ ಬರುತ್ತಿರಲಿಲ್ಲ. ಜೊತೆಗಿದ್ದವರು ಪ್ರಧಾನಿಗೆ ನನ್ನನ್ನು ಪರಿಚಯಿಸಿದರು’ ಎಂದು ಹಾಜಬ್ಬ ಹೇಳಿದಾಗ, ಮಾಧ್ಯಮ ಪ್ರತಿನಿಧಿಗಳು ಕೈಗೆ ಏನಾಗಿತ್ತು ಎಂದು ಪ್ರಶ್ನಿಸಿದರು. 

‘ದೆಹಲಿಗೆ ಹೋಗುವ ಮೊದಲು ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲು ನನ್ನ ಮನೆಗೆ ಅಧಿಕಾರಿಗಳು ಬಂದಿದ್ದರು. ಅವರಿಗೆ ಎಳನೀರು ಕತ್ತರಿಸಿ ಕೊಡುವಾಗ ಕೈ ಕಡಿದಿತ್ತು’ ಎಂದು ಹಾಜಬ್ಬ ತಣ್ಣಗೆ ಹೇಳಿದರು.

‘ಪ್ರಶಸ್ತಿ ಸ್ವೀಕರಿಸಲು ಹೋಗುವಾಗ ನಾನು ಚಪ್ಪಲಿ ಹಾಕದಿರುವುದು ಸತ್ಯ. ದೇಶದ ಪ್ರಧಾನಿ, ರಾಷ್ಟ್ರಪತಿ ಅವರ ಎದುರು ಅತ್ಯುನ್ನತ ಗೌರವ ಸ್ವೀಕರಿಸಲು ಹೋಗುವಾಗ ಚಪ್ಪಲಿ ಧರಿಸುವುದು ನನಗೆ ಸರಿ ಕಾಣಲಿಲ್ಲ. ಅದಕ್ಕೆ ಚಪ್ಪಲಿ ತೆಗೆದಿಟ್ಟು ಹೋಗಿದ್ದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು