ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಸಂತನಿಗೆ ದೇಶದ ಅತ್ಯುನ್ನತ ಗೌರವ

ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬಗೆ ಪದ್ಮಶ್ರೀ ಪ್ರದಾನ
Last Updated 8 ನವೆಂಬರ್ 2021, 16:02 IST
ಅಕ್ಷರ ಗಾತ್ರ

ಮುಡಿಪು: ಬಿಳಿ ಅಂಗಿ, ಬಿಳಿ ಧೋತಿ, ಹೆಗಲಲ್ಲಿ ಒಂದು ಶಾಲು ಹಾಕಿಕೊಂಡು ನಗರದ ಮಾರುಕಟ್ಟೆಯಲ್ಲಿ ಕಿತ್ತಳೆ ಮಾರುತ್ತಿದ್ದ ವ್ಯಕ್ತಿಗೆ, ವಿದೇಶದಿಂದ ಬಂದಿದ್ದ ಗ್ರಾಹಕರೊಬ್ಬರು, ‘ಹೌ ಮಚ್‌’ (How Much) ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಲಾಗದ ಆ ವ್ಯಕ್ತಿ, ‘ನಾನು ಶಿಕ್ಷಣ ಪಡೆಯದಿದ್ದರೆ ಏನಾಯಿತು, ನಮ್ಮ ಊರಿನ ಮಕ್ಕಳಾದರೂ ಶಿಕ್ಷಣ ಪಡೆಯಲು ಸಾಧ್ಯವಾಗುವಂತೆ ಊರಲ್ಲಿ ಶಾಲೆ ಆರಂಭಿಸಬೇಕು’ ಎಂಬ ದೃಢ ಸಂಕಲ್ಪ ಮಾಡಿದರು. ಅದರಂತೆ ಗ್ರಾಮದಲ್ಲಿ ಶಾಲೆಯೂ ಆರಂಭವಾಯಿತು. ಹಾಗೆ ಕಿತ್ತಳೆ ಮಾರಿ ಬಂದ ಹಣದಿಂದ ಶಾಲೆಯನ್ನು ತೆರೆದ ವ್ಯಕ್ತಿಗೆ ದೇಶದ ನಾಲ್ಕನೇ ಅತ್ಯುನ್ನತ ಗೌರವ ‘ಪದ್ಮಶ್ರೀ’ ದೊರೆತಿದೆ.

ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬ ಅವರು ಸೋಮವಾರ ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸುವಾಗಲೂ ಅದೇ ಶುಭ್ರ ಅಂಗಿ, ಧೋತಿಯೊಂದಿಗೆ ಬರಿಗಾಲಿನಲ್ಲಿಯೇ ಇದ್ದುದು ಅವರ ಸರಳತೆಗೆ ಸಾಕ್ಷಿಯಾಗಿತ್ತು.

ಮಂಗಳೂರು ತಾಲ್ಲೂಕಿನ ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಹಾಜಬ್ಬ ಅವರು, ಬಡತನದಿಂದ ಶಾಲೆಯ ಮೆಟ್ಟಿಲು ಹತ್ತಲಾಗಲಿಲ್ಲ. ಜೀವನೋಪಾಯಕ್ಕೆ ಬುಟ್ಟಿಯಲ್ಲಿ ಕಿತ್ತಳೆ ಇಟ್ಟುಕೊಂಡು ಮಂಗಳೂರಿನ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಎದುರಿಸಬೇಕಾದ ಸಂಕಷ್ಟದ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದರು. ತಾನು ಶಿಕ್ಷಣದಿಂದ ವಂಚಿತನಾದರೂ ಮುಂದಿನ ಪೀಳಿಗೆ ಇಂತಹ ಪರಿಸ್ಥಿತಿ ಎದುರಿಸಬಾರದು. ಅದಕ್ಕೆ ಏನಾದರೂ ಮಾಡಬೇಕು ಎಂಬ ಅಚಲ ನಿರ್ಧಾರ ಕೈಗೊಂಡ ಹಾಜಬ್ಬ, ಅವಿರತ ಶ್ರಮದಿಂದ ಹರೇಕಳದಲ್ಲಿ ಶಾಲೆಯ ನಿರ್ಮಾಣಕ್ಕೆ ಕಾರಣರಾದರು.

ಬಡತನದ ನಡುವೆ ಕಿತ್ತಳೆ ಮಾರಾಟದ ಮಾಡುತ್ತಲೇ, ಶಾಲೆಗಾಗಿ ಕಚೇರಿಗಳಿಗೆ ಅಲೆದಾಡಿದರು. 2000ನೇ ಜೂ.17 ರಂದು ಹರೇಕಳ ನ್ಯೂಪಡುಗೆ ಸರ್ಕಾರಿ ಶಾಲೆ ಮಂಜೂರು ಮಾಡುವಲ್ಲಿ ಯಶಸ್ವಿಯಾದರು. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಪಕ್ಕದ ಬೋರಲುಗುಡ್ಡದ 40 ಸೆಂಟ್ಸ್‌ ಜಾಗ ಖರೀದಿಸಲು, ಉಳಿತಾಯ ಮಾಡಿದ್ದ ₹25ಸಾವಿರ ನೀಡಿದರು. ಉಳಿದ ಹಣವನ್ನು ದಾನಿಗಳಿಂದ ಸಂಗ್ರಹಿಸಿದರು. ಶಾಲೆಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ದಾನಿಗಳ ನೆರವಿನೊಂದಿಗೆ ಹಾಜಬ್ಬ ಒದಗಿಸಿದರು. ಅಂದಿನಿಂದ ಇಂದಿನವರೆಗೆ ಶಾಲೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಹರೇಕಳ ಹಾಜಬ್ಬರ ಕಾರ್ಯವನ್ನು ಗುರುತಿಸಿ, ಕೇಂದ್ರ ಸರ್ಕಾರ 2020ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಹಾಜಬ್ಬ ಅವರ ಅವಿರತ ಶ್ರಮದಿಂದ ಇದೀಗ ಕಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮಟ್ಟಕ್ಕೆ ತಲುಪಿದ್ದು, ಇದನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ಕನಸು ಅವರದ್ದು. ತಮಗೆ ಬಂದ ಲಕ್ಷಾಂತರ ರೂಪಾಯಿ ಪ್ರಶಸ್ತಿ ಮೊತ್ತವನ್ನು ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸಿದ್ದಾರೆ. ಸರ್ಕಾರಿ ಶಾಲೆಗಾಗಿ ಎಲ್ಲವನ್ನೂ ಮುಡುಪಾಗಿಟ್ಟಿದ್ದಾರೆ. ₹70 ಲಕ್ಷ ದೇಣಿಗೆ, ಅನುದಾನವನ್ನು ವಿವಿಧ ಮೂಲಗಳಿಂದ ಒದಗಿಸಿದ್ದಾರೆ. ಶಾಲೆಯ ಹೆಸರಿಗೆ ಒಂದು ಎಕರೆ ಮೂವತ್ತಮೂರೂವರೆ ಸೆಂಟ್ಸ್‌ ಜಾಗವನ್ನು ಪಹಣಿ ಮಾಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT