ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಭೆ ಮುಗಿಸಲು ಯತ್ನ: ಬಿಜೆಪಿ ವಿರುದ್ಧ ರಾಜೇಶ್‌ ಪವಿತ್ರನ್‌ ಆಕ್ರೋಶ

Last Updated 26 ಸೆಪ್ಟೆಂಬರ್ 2021, 3:27 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿಯು ಹಿಂದೂ ಮುಖಂಡರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದೂ ಮಹಾ ಸಭೆಯನ್ನು ಮುಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಯುವ ಹಿಂದೂ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಪವಿತ್ರನ್ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೇವಾಲಯವನ್ನು ಕೆಡವಿದ ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿದ ನಂತರ, ಪೊಲೀಸರು ಹಿಂದೂ ಮಹಾ ಸಭಾ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಇಲ್ಲದ ಕಾರ್ಯಕರ್ತರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದರು.

ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಮತ್ತು ಹಿಂದೂ ನಾಯಕರನ್ನು ಜೈಲಿಗೆ ಕಳುಹಿಸುವುದು ಆಡಳಿತಾರೂಢ ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿ, ಕಾಂಗ್ರೆಸ್‌ನ ಇನ್ನೊಂದು ಮುಖ. ಅವರಿಗೆ ಹಿಂದುತ್ವ ಬೇಡ. ಅವರೂ ಅಲ್ಪಸಂಖ್ಯಾತರ ತುಷ್ಟೀಕರಣ ಆರಂಭಿಸಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಸಂಪೂರ್ಣ ಗೋಹತ್ಯೆ ನಿಷೇಧಿಸುವಲ್ಲಿ ವಿಫಲವಾಗಿದೆ. ಸಂಪೂರ್ಣ ಗೋಹತ್ಯೆ ನಿಷೇಧವಿದ್ದರೆ ನಿಮಗೆ ಕಸಾಯಿಖಾನೆಗಳು ಏಕೆ ಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ಪಕ್ಷದ ಕೆಟ್ಟ ಆಡಳಿತದಿಂದಾಗಿ ಹಿಂದೂ ನಾಯಕರ ಕಿರುಕುಳ ಮತ್ತು ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಮಾಡಿದಂತೆಯೇ, ಬಿಜೆಪಿ ಅಲ್ಪಸಂಖ್ಯಾತರನ್ನು ಓಲೈಸುವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂ ವಿರೋಧಿ ನೀತಿಗಳನ್ನು ಜಾರಿಗೊಳಿಸುವುದನ್ನು ಇಡೀ ದೇಶ, ರಾಜ್ಯ ಮತ್ತು ಹಿಂದೂ ಸಮುದಾಯ ನೋಡುತ್ತಿದೆ. ಗಮನವನ್ನು ಬೇರೆಡೆ ಸೆಳೆಯಲು ಜನರು, ಹಿಂದೂ ಮಹಾಸಭಾ ಕಾರ್ಯಕರ್ತರ ವಿರುದ್ಧ ನಕಲಿ ಮತ್ತು ವಂಚನೆ ಆರೋಪದಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದೂರಿದರು.

ನಿತಿನ್, ಪ್ರಸಾದ್, ಚೇತನ್, ರಾಜೇಶ್ ಮತ್ತು ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT