ಪುತ್ತೂರು: ಹನಿಟ್ರ್ಯಾಪ್‌ಗೆ ಒಳಗಾಗಿ ಸುಮಾರು ₹ 30 ಲಕ್ಷ ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರಿನ ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ 7 ಮಂದಿ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯನ್ನು ಬಂಧಿಸಲಾಗಿದೆ.
ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸಿರ್ (25) ಹನಿಟ್ರ್ಯಾಪ್‌ಗೆ ಒಳಗಾದ ಯುವಕ.
ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮುಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್ ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಶಾ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹನಿಟ್ರ್ಯಾಪ್ ಜಾಲದ ತಂಡ ಏಪ್ರಿಲ್ ತಿಂಗಳಿನಲ್ಲಿ ಅಬ್ದುಲ್ ನಾಸೀರ್ ಅವರನ್ನು ಮೋಸದ ಬಲೆಗೆ ಸಿಲುಕಿಸಿ, ಹಣ ವಸೂಲಿ ಮಾಡಿತ್ತು. ಈ ಕುರಿತು ಅವರು ಪೊಲೀಸ್ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಇದೀಗ ಮೇಲಧಿಕಾರಿಗಳ ಸೂಚನೆಯಂತೆ ಪ್ರಕರಣ ದಾಖಲಾಗಿದೆ.
‘ಆರೋಪಿಗಳು ತನ್ನಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಒಳಸಂಚು ರೂಪಿಸಿ, ಯುವತಿಯನ್ನು ಬಳಸಿಕೊಂಡು ತನ್ನ ನಗ್ನ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಹಾಗೂ ಜೀವ ಬೆದರಿಕೆಯೊಡ್ಡುವ ಮೂಲಕ ಬಲಾತ್ಕಾರವಾಗಿ ಹಣ ವಸೂಲಿ ಮಾಡಿದ್ದಾರೆ. ಈಗಾಗಲೇ ₹ 30 ಲಕ್ಷ ನೀಡಿದ್ದರೂ ಈ ವಿಡಿಯೊವನ್ನು ಮುಂದಿಟ್ಟುಕೊಂಡು ಇನ್ನಷ್ಟೂ ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಅಬ್ದುಲ್ ನಾಸಿರ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಕೈಗೆತ್ತಿಗೊಂಡಿರುವ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರು ಆರೋಪಿಗಳ ಪೈಕಿ ಮಂಗಳೂರಿನ ತನೀಶಾ ಎಂಬಾಕೆಯನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆಗೆ ಮಧ್ಯಂತರ ಜಾಮೀನು ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.