ಶುಕ್ರವಾರ, ನವೆಂಬರ್ 22, 2019
22 °C
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ

ಟರ್ಮಿನಲ್‌ಗೆ ಅಕ್ರಮ ಪ್ರವೇಶ: ಕೇರಳದ ವ್ಯಕ್ತಿಯ ಬಂಧನ

Published:
Updated:

ಮಂಗಳೂರು: ತಿದ್ದಿದ ಟಿಕೆಟ್‌ ಪ್ರತಿಯನ್ನು ತೋರಿಸಿ ಶನಿವಾರ ರಾತ್ರಿ ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನದ ಅಂತರರಾಷ್ಟ್ರೀಯ ಪ್ರಯಾಣಿಕರ ಟರ್ಮಿನಲ್‌ ಪ್ರವೇಶಿಸಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಕೇರಳದ ಕಾಸರಗೋಡು ನಿವಾಸಿ ಆರೀಫ್‌ ಕೊತ್ತಿಕಲ್ ಬಂಧಿತ ಆರೋಪಿ. ಈತ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ವಾಪಸಾಗುತ್ತಿರುವಾಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಸೆರೆ ಹಿಡಿದಿದ್ದರು. ಬಳಿಕ ಬಜ್ಪೆ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಪ್ರಕರಣ ದಾಖಲಿಸಿ, ಈತನನ್ನು ಬಂಧಿಸಲಾಗಿದೆ.

ಶನಿವಾರ ತಡರಾತ್ರಿ 12.54ಕ್ಕೆ ದುಬೈಗೆ ತೆರಳಿದ ವಿಮಾನದಲ್ಲಿ ಆರೀಫ್‌ ಕುಟುಂಬದ ನಾಲ್ವರು ಪ್ರಯಾಣಿಸಿದ್ದಾರೆ. ಅವರ ಟಿಕೆಟ್‌ನ ಡಿಜಿಟಲ್‌ ಪ್ರತಿಯನ್ನು ತಿರುಚಿದ್ದ ಆರೋಪಿ ಅದರಲ್ಲಿ ತನ್ನ ಹೆಸರನ್ನೂ ಸೇರಿಸಿಕೊಂಡಿದ್ದ. ಪಾಸ್‌ಪೋರ್ಟ್‌ ಮತ್ತು ಟಿಕೆಟ್‌ ತೋರಿಸಿ ಅಂತರರಾಷ್ಟ್ರೀಯ ಪ್ರಯಾಣಿಕರ ನಿರ್ಗಮನ ಟರ್ಮಿನಲ್‌ಗೆ ಹೋಗಿದ್ದ.

ತನ್ನ ಕುಟುಂಬದ ಸದಸ್ಯರು ವಿಮಾನ ಏರಿದ ಬಳಿಕ ಅವರನ್ನು ಬೀಳ್ಕೊಟ್ಟು ವಾಪಸು ಬರುತ್ತಿದ್ದ ಆರೀಫ್‌ನನ್ನು ಶನಿವಾರ ರಾತ್ರಿ 11.45ರ ಸುಮಾರಿಗೆ ಸಿಐಎಸ್‌ಎಫ್‌ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ದುಬೈಗೆ ತೆರಳಿದ ಕುಟುಂಬದ ಸದಸ್ಯರನ್ನು ಬೀಳ್ಕೊಡುವುದಕ್ಕಾಗಿ ಟಿಕೆಟ್‌ ತಿದ್ದಿ ಒಳಕ್ಕೆ ಹೋಗಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮೊಕದ್ದಮೆ ದಾಖಲಿಸಿರು ‍ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸಿಐಎಸ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)