ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಟಿಪ್ಪು ಕಟೌಟ್‌ ತೆರವಿಗೆ ನೋಟಿಸ್‌– ಡಿವೈಎಫ್‌ಐ ಆಕ್ಷೇಪ

Published 19 ಫೆಬ್ರುವರಿ 2024, 4:54 IST
Last Updated 19 ಫೆಬ್ರುವರಿ 2024, 4:54 IST
ಅಕ್ಷರ ಗಾತ್ರ

ಮಂಗಳೂರು: ತೊಕ್ಕೊಟ್ಟುವಿನಲ್ಲಿ ಇದೇ 25ರಿಂದ ಮೂರು ದಿನಗಳ ಕಾಲ ಏರ್ಪಡಿಸಿರುವ ಡಿವೈಎಫ್‌ಐ ಸಮ್ಮೇಳನದ ಸಲುವಾಗಿ ಪಾವೂರು ಗ್ರಾಮದ ಹರೇಕಳದಲ್ಲಿ ಸಂಘಟನೆಯ ಕಚೇರಿ ಬಳಿ ಅಳವಡಿಸಿರುವ ಟಿಪ್ಪು ಸುಲ್ತಾನ್‌ ಕಟೌಟ್‌ ತೆರವುಗೊಳಿಸುವಂತೆ ಕೊಣಾಜೆ ಠಾಣೆ ಇನ್‌ಸ್ಪೆಕ್ಟರ್‌ ಹರೇಕಳ ಡಿವೈಎಫ್‌ಐ ಘಟಕದ ಅಧ್ಯಕ್ಷರಿಗೆ ಭಾನುವಾರ ನೋಟೀಸ್‌ ನೀಡಿದ್ದಾರೆ.

ಈ ನೋಟಿಸ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ಡಿವೈಎಫ್‌ಐ ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್‌ ಕಟೌಟ್‌ ತೆರವುಗೊಳಿಸುವುದಿಲ್ಲ ಎಂದುಸ್ಪಷ್ಟಪಡಿಸಿದೆ.

‘ಹರೇಕಳದಲ್ಲಿ ಡಿವೈಎಫ್‌ಐ ಸಂಘಟನೆಗೆ ಕಚೇರಿ ಬಳಿ 6 ಅಡಿ ಎತ್ತರದ ಟಿಪ್ಪು ಪ್ರತಿಮೆಯನ್ನು ಯಾವುದೇ ಅನುಮತಿ ಪಡೆಯದೇ ಅಳವಡಿಸಿರುವುದು ಕಂಡುಬಂದಿದೆ. ಠಾಣೆಯ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕಟೌಟ್‌ ತೆರವುಗೊಳಿಸಬೇಕು’ ಎಂದು ಕೊಣಾಜೆ ಠಾಣಾಧಿಕಾರಿ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್‌, ‘ಡಿವೈಎಫ್‌ಐ ಸಮ್ಮೇಳನದ ಪ್ರಯುಕ್ತ ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಕಟೌಟ್ ಹಾಗೂ ಫ್ಲೆಕ್ಸ್‌ಗಳನ್ನು ಅಲ್ಲಲ್ಲಿ ಅಳವಡಿಸಿದ್ದೇವೆ. ಟಿಪ್ಪು ಸುಲ್ತಾನ್ ಕಟೌಟ್, ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸರ್ಕಾರ ನಿಷೇಧ ಹಾಕಿದೆಯಂತೆ. ಇಂತಹ ನಿಷೇಧ ಹೇರಿದ್ದು ಯಾವ ಸರ್ಕಾರ. ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ನೇತೃತ್ವದ ಸರ್ಕಾರವೇ ಇದೆಯೇ. ಈಗಲೂ ಪೊಲೀಸರು ‘ಸಂಘಿ’ ಮನಃಸ್ಥಿತಿಯಲ್ಲೆ ಕೆಲಸ ಮಾಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ .

‘ಟಿಪ್ಪು ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿ–ಚನ್ನಯರ ಪ್ರತಿಮೆಗಳೂ ಸೇರಿದಂತೆ ಎಲ್ಲಾ ಆದರ್ಶ ವ್ಯಕ್ತಿಗಳ ಕಟೌಟ್, ಬ್ಯಾನರ್‌ಗಳ ಬಳಿ ಡಿವೈಎಫ್ಐ ಕಾರ್ಯಕರ್ತರು ಕಾವಲು ಕಾಯುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT