ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಕ್ಕೆ ಜನಪ್ರೀತಿಯ ಬಲ; ‘ಕರೆ’ಗಳಲ್ಲಿ ಸಂಭ್ರಮ

ಕೋವಿಡೋತ್ತರ ಕಾಲದಲ್ಲಿ ಕೋಣಗಳ ಓಟಕ್ಕೆ ಭಾರಿ ಬೆಂಬಲ; ‘ಕರೆ’ಗಳಲ್ಲಿ ಐದು ತಿಂಗಳ ಸಂಭ್ರಮ
Last Updated 28 ನವೆಂಬರ್ 2022, 13:04 IST
ಅಕ್ಷರ ಗಾತ್ರ

ಮಂಗಳೂರು: ಗದ್ದೆಗಳಲ್ಲೆಲ್ಲ ಮಣ್ಣು ತುಂಬಿಸಿ ಕಟ್ಟಡಗಳನ್ನು ನಿರ್ಮಿಸಿದರು, ಕೋಣಗಳನ್ನು ಸಾಕುವವರ ಆಸಕ್ತಿ ಕೊರತೆಯಿಂದಾಗಿ ಸ್ಪರ್ಧೆ ಕಡಿಮೆಯಾಯಿತು, ಕರಾವಳಿಯ ಜನಪದ ಕ್ರೀಡೆಯೊಂದರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು ಎಂಬ ಗೊಣಗಾಟದ ಜೊತೆಗೆ, ಕಳೆದ ಎರಡು ವರ್ಷಗಳಿಂದ ಕೋವಿಡ್‌ ಮಹಾಮಾರಿಯು ಕಂಬಳಕ್ಕೆ ಅಡ್ಡಿ ಉಂಟುಮಾಡಿತ್ತು.

ಆದರೆ, ಸ್ಥಗಿತಗೊಂಡಿದ್ದ ಕಂಬಳಕ್ಕೆ ಕಳೆದ ವರ್ಷ ಮರುಚಾಲನೆ ಸಿಕ್ಕಿತ್ತು. ಈ ಬಾರಿ ಕೋಣಗಳ ಓಟ ಹೆಚ್ಚು ಜನಪ್ರಿಯವಾಗಿದೆ. ಈ ಋತುವಿನಲ್ಲಿ ಪೂರ್ಣಪ್ರಮಾಣದ ಆಧುನಿಕ ಕಂಬಳದ 21 ಸ್ಪರ್ಧೆಗಳ ಪಟ್ಟಿಯೂ ಸಿದ್ಧವಾಗಿದೆ. ಈ ಪಟ್ಟಿಯ ಮೊದಲ ಕಂಬಳ (ಸತ್ಯ–ಧರ್ಮ) ಬಂಟ್ವಾಳ ತಾಲ್ಲೂಕಿನ ಕಕ್ಯಪದವಿನಲ್ಲಿ ಭಾನುವಾರ ಕೊನೆಗೊಂಡಿದೆ. ಈ ಕಂಬಳಕ್ಕೆ ಸಿಕ್ಕಿದ ಜನಬೆಂಬಲ ಆಯೋಜಕರಲ್ಲೇ ಅಚ್ಚರಿ ಮೂಡಿಸಿದೆ.

ಗ್ರಾಮಾಂತರ ಪ್ರದೇಶವಾದ ಕಕ್ಯಪದವಿಗೆ ಕೋಣಗಳನ್ನು ತೆಗೆದುಕೊಂಡು ಹೋಗಲು ಹೆಚ್ಚಿನವರು ಹಿಂಜರಿಯುತ್ತಿದ್ದರು.ಸತ್ಯ–ಧರ್ಮ ಜೋಡುಕರೆ ಕಂಬಳಕ್ಕೆ 120ರಿಂದ 150 ಜೊತೆ ಕೋಣಗಳನ್ನಷ್ಟೇ ನಿರೀಕ್ಷಿಸಲಾಗಿತ್ತು. ಆದರೆ, ದಶಮಾನೋತ್ಸವದ ಈ ಕಂಬಳದಲ್ಲಿ 220 ಜೋಡಿಗಳ ಓಟಕ್ಕಾಗಿ ಎರಡು ದಿನ ಪೂರ್ತಿ ಬೆವರು ಸುರಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು.

ಬಂಟ್ವಾಳ ತಾಲ್ಲೂಕು ಒಂದರಲ್ಲೇ ಹಿಂದೆ ಸುಮಾರು 7 ಕಂಬಳಗಳು ನಡೆಯುತ್ತಿದ್ದವು. ಈಗ ಅವುಗಳ ಸಂಖ್ಯೆ ಎರಡಕ್ಕೆ ಇಳಿದಿದೆ. ಆದರೂ ಈ ಸಾಲಿನ ಮೊದಲ ಕಂಬಳದಲ್ಲಿ ‘ಮರಿಕೋಣ’ಗಳನ್ನೂ ಕರೆಗೆ ಇಳಿಸುವ ಪ್ರಸಂಗ ಬಂದುದು ಕಂಬಳ ಸಮಿತಿಯಲ್ಲಿ ನವೋತ್ಸಾಹ ತುಂಬಿದೆ. ಮೂಡುಬಿದಿರೆ ಕಂಬಳವನ್ನು ಆಳ್ವಾಸ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಜಾಂಬೂರಿ ಸಂದರ್ಭದಲ್ಲಿ ಆಯೋಜಿಸಿರುವುದರಿಂದ ಆ ಕಂಬಳಕ್ಕೆ ದಾಖಲೆ ಪ್ರಮಾಣದ ವೀಕ್ಷಕರು ಸೇರುವ ಸಾಧ್ಯತೆ ಇದೆ.

ಧಾರ್ಮಿಕತೆ, ಸಂಘಟನೆ, ವ್ಯಾಪಾರ

ಬೇಸಾಯಕ್ಕೆ ಸಂಬಂಧಿಸಿದ ಆಚರಣೆಯಾಗಿದ್ದ ಕಂಬಳ ಈಗ ಸಂಪ್ರದಾಯ ಮತ್ತು ಧಾರ್ಮಿಕತೆಯನ್ನು ಉಳಿಸಿಕೊಂಡೇ ಸಂಘಟನೆಗೂ ವ್ಯಾಪಾರ ವಹಿವಾಟು ಚುರುಕು ಪಡೆಯುವುದಕ್ಕೂ ನೆರವಾಗುತ್ತಿದೆ. ಹೀಗಾಗಿ ಆಧುನಿಕ ಕಂಬಳದ ಕಣಗಳು ಕಳೆಗಟ್ಟುತ್ತಿವೆ. ಮೂಲ್ಕಿ, ಐಕಳಬಾವ, ಕಟಪಾಡಿ ಮತ್ತು ಬಳ್ಳಮಂಜ ಕಂಬಳಗಳಲ್ಲಿ ಸಂಪ್ರದಾಯಗಳೆಲ್ಲವೂ ಉಳಿದುಕೊಂಡು ಬಂದಿವೆ. ಆಧುನಿಕತೆಯ ಸ್ಪರ್ಶವೂ ಇದೆ.

‘ನವೆಂಬರ್ 15ರಿಂದ ಸರಿಯಾಗಿ ಒಂದು ತಿಂಗಳು ಕುಂದಾಪುರದಿಂದ ಉಡುಪಿ ವರೆಗಿನ ಪ್ರದೇಶದಲ್ಲಿ ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. ಅವುಗಳು ಜಾತ್ರೆಯ ಹಾಗೆ. ಸಾಂಪ್ರದಾಯಿಕವಾಗಿ ನಡೆಯುವ ಈ ಕಂಬಳಗಳ ನಡುವೆ ಆಧುನಿಕ ಕಂಬಳಗಳು ಹಬ್ಬದ ವಾತಾವರಣ ಮೂಡಿಸುತ್ತವೆ’ ಎಂದು ಕಂಬಳದ ರೆಫರಿ ಸುರೇಶ್ ಹೇಳುತ್ತಾರೆ.

ನೇಗಿಲು, ಜೋಡು ಕರೆ, ಹಗ್ಗ ಹಿರಿ, ಹಗ್ಗ ಕಿರಿ, ಹಲಗೆ, ಅಡ್ಡ ಹಲಗೆ, ಕೆನೆ ಹಲಗೆ ಮುಂತಾದ ಪದಗಳೆಲ್ಲವೂ ಕಂಬಳ ಕಣದಲ್ಲಿ ಇನ್ನೂ ಉಳಿದುಕೊಂಡಿವೆ ಎಂಬುದು ಈ ಕ್ರೀಡೆಯ ಜೀವಂತಿಕೆಯನ್ನು ಸಾರುತ್ತದೆ. ಕೃಷಿ ಚಟುವಟಿಕೆ ಮುಗಿದ ನಂತರ ಕೋಣಗಳಿಗೆ ಸುದೀರ್ಘ ವಿಶ್ರಾಂತಿ ಸಿಗುತ್ತದೆ. ಮತ್ತೊಂದು ಋತುವಿನಲ್ಲಿ ಚುರುಕು ಪಡೆದುಕೊಳ್ಳುವುದಕ್ಕೆ ಕೋಣಗಳನ್ನು ಸಜ್ಜುಗೊಳಿಸುವ ತಂತ್ರವೂ ಕಂಬಳದ ಹಿಂದೆ ಇದೆ. ಈಗ ಕೋಣಗಳನ್ನು ಪ್ರತಿಷ್ಠೆಗಾಗಿ ಸಾಕುವವರೂ ಇದ್ದಾರೆ. ಕೆಲವು ಕಡೆಗಳಲ್ಲಿ ಅಭ್ಯಾಸ ಅಥವಾ ‘ವಾರ್ಮ್‌ ಅಪ್‌’ಗಾಗಿ ಕೋಣಗಳನ್ನು ಗದ್ದೆಗೆ ಇಳಿಸುವುದೂ ಇದೆ. ಅದೇನೇ ಇರಲಿ, ತುಳುನಾಡಿನ ಸಂಸ್ಕೃತಿಯೊಂದು ಉಳಿದುಕೊಂಡು ಬಂದಿರುವುದು ಸಮಾಧಾನದ ವಿಷಯ ಎಂಬುದು ಕಂಬಳ ಪ್ರಿಯರ ಅಂಬೋಣ.

ಪೈವಳಿಕೆಯೋ ಹೊಸ ಕಂಬಳವೋ?

ಶ್ರೀನಿವಾಸಗೌಡ ಅವರ ದಾಖಲೆಯ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ನಡೆದ ಕಂಬಳದಲ್ಲಿ, ತಾಂತ್ರಿಕ ಅಂಶಗಳ ಅಧ್ಯಯನಕ್ಕೆ ಭಾರತ ಕ್ರೀಡಾ ಪ್ರಾಧಿಕಾರದ ತಂಡ ಬಂದಿತ್ತು. ಹೀಗಾಗಿ ಆ ಕಂಬಳ ಗಮನ ಸೆಳೆದಿತ್ತು. ಈ ಬಾರಿ ಪಟ್ಟಿಯಲ್ಲಿದ್ದರೂ ಪೈವಳಿಕೆ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಅದು ನಡೆಯದೇ ಇದ್ದರೆ, ಆ ದಿನಾಂಕದಲ್ಲಿ ತಲಪಾಡಿ ಸಮೀಪದ ಬೋಳದಪದವಿನಲ್ಲಿ ಸಜ್ಜುಗೊಳಿಸಿರುವ ಕರೆ ಹೊಸ ಕಂಬಳಕ್ಕೆ ವೇದಿಕೆಯಾಗಲಿದೆ.

ಓಟಗಾರರು ‘ಶಿಫ್ಟ್‌’

ಪ್ರಮುಖ ಓಟಗಾರರು ಈ ಬಾರಿ ‘ತಂಡ’ವನ್ನು ಬದಲಾಯಿಸಿದ್ದಾರೆ. ಆದರೂ ಶ್ರೀನಿವಾಸ ಗೌಡ, ನಿಶಾಂತ್ ಶೆಟ್ಟಿ, ವಿವೇಕ್‌ ದೇವಾಡಿಗ, ಇರ್ವತ್ತೂರು ಆನಂದ, ವಿಶ್ವನಾಥ ದೇವಾಡಿಗ, ಗರೋಡಿ ಶ್ರೀಧರ್‌, ಸುರೇಶ್ ಶೆಟ್ಟಿ, ನಟೇಶ್‌ ಮುಂತಾದವರು ಮಿಂಚು ಮೂಡಿಸುವ ನಿರೀಕ್ಷೆ ಇದೆ ಎಂದು ಮುಖ್ಯ ರೆಫರಿ ಮತ್ತು ಜಿಲ್ಲಾ ಕಂಬಳ ಸಮಿತಿಯ ಗೌರವ ಸಲಹೆಗಾರ ಗುಣಪಾಲ ಕಡಂಬ ಅಭಿಪ್ರಾಯಪಟ್ಟರು.

‘ಕ್ರೀಡೆ’ಯ ಬಲಕ್ಕೆ ಸತತ ಪ್ರಯತ್ನ

ಶ್ರೀನಿವಾಸ ಗೌಡ, ನಿಶಾಂತ್ ಶೆಟ್ಟಿ ಮುಂತಾದವರು ದಾಖಲೆಗಳನ್ನು ನಿರ್ಮಿಸಿ ಸೃಷ್ಟಿಸಿದ ‘ಹವಾ’ದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕಂಬಳವನ್ನು ಅಪ್ಪಟ ಕ್ರೀಡೆಯಾಗಿ ಪರಿಗಣಿಸಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಕಂಬಳ ಸಂಸ್ಥೆಯನ್ನು ಹುಟ್ಟುಹಾಕುವ ಆಶಯಕ್ಕೆ ಸರ್ಕಾರದ ಅಂಕಿತ ಬೀಳುವುದೊಂದೇ ಬಾಕಿ ಇದೆ.

ಸೆಪ್ಟೆಂಬರ್ 9ರಂದು ಸಂಸ್ಥೆಯ ನೋಂದಣಿ ಆಗಿದ್ದು ಸಂಸ್ಥೆಗೆ ಅನುಮೋದನೆ ನೀಡುವಂತೆ ಸೆಪ್ಟೆಂಬರ್‌ 27ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಸಂಸ್ಥೆಯನ್ನು ಸರ್ಕಾರ ಯಾವಾಗ ಅಧಿಕೃತಗೊಳಿಸುತ್ತದೆ ಎಂಬ ಕುತೂಹಲದೊಂದಿಗೆ ಸಂಘಟಕರು ಕಾಯುತ್ತಿದ್ದಾರೆ.

‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚನೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳೂ ಪೂರ್ಣಗೊಂಡಿವೆ. ಶೀಘ್ರದಲ್ಲೇ ಸರ್ಕಾರ ಇದನ್ನು ಅಂತಿಮಗೊಳಿಸುವ ವಿಶ್ವಾಸವಿದೆ’ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್ ಹೇಳಿದರು.

ಕೂಳೂರು ಪೊಯ್ಯೊಳು ಪಿ.ಆರ್‌.ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿಯೂ ವಿಜಯಕುಮಾರ್ ಕಂಗಿನಮನೆ ಅವರನ್ನು ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ತಿಳಿಸಿದರು.

***

ಕಂಬಳ ಈಗ ತುಂಬ ಜನಪ್ರಿಯ. ಸಿನಿಮಾ ಮತ್ತು ಸಾಮಾಜಿಕ ತಾಣಗಳಲ್ಲಿ ಆಗಿರುವ ಪ್ರಚಾರದಿಂದಾಗಿ ಈ ಕ್ರೀಡೆಯಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ. ಸಂಘಟಕರಿಗೆ ಇದೊಂದು ಸವಾಲು ಕೂಡ. ಇಷ್ಟೊಂದು ಕೋಣಗಳ ನಿರ್ವಹಣೆ, ಹಗಲು–ರಾತ್ರಿ ಸ್ಪರ್ಧೆಗಳ ಆಯೋಜನೆ ಮುಂತಾದವೆಲ್ಲ ನಡೆಯಬೇಕಾಗಿದೆ. ಕೋಣಗಳು ಮತ್ತು ಅವುಗಳನ್ನು ಓಡಿಸುವವರ ಬಳಲಿಕೆ ಕಡಿಮೆ ಮಾಡಲು ಹೊಸ ಸೂತ್ರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವೂ ಇದೆ.

ರೋಹಿತ್ ಹೆಗ್ಡೆ ಎರ್ಮಾಳ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ


ಈ ಋತುವಿನ ಕಂಬಳಗಳು

ದಿನಾಂಕ; ಸ್ಥಳ

ಡಿ.3; ವೇಣೂರು

ಡಿ.10; ಬಾರಾಡಿ ಬೀಡು

ಡಿ.17; ಹೊಕ್ಕಾಡಿಗೋಳಿ

ಡಿ.18; ಬಳ್ಳಮಂಜ

ಡಿ.24; ಮೂಡುಬಿದಿರೆ

ಡಿ.31; ಮೂಲ್ಕಿ

ಜ.7; ಮಿಯಾರು

ಜ.14; ಅಡ್ವೆ ನಂದಿಕೂರು

ಜ.22; ಮಂಗಳೂರು

ಜ.28; ಪುತ್ತೂರು

ಫೆ.4; ಐಕಳಬಾವ

ಫೆ.11; ವಾಮಂಜೂರು

ಫೆ.18; ಜಪ್ಪು

ಫೆ.25; ಕಟಪಾಡಿ

ಮಾ.4; ಬಂಟ್ವಾಳ

ಮಾ.11; ಉಪ್ಪಿನಂಗಡಿ

ಮಾ.18; ಬಂಗಾಡಿ

ಮಾ.25; ಪೈವಳಿಕೆ

ಏ.1; ಸುರತ್ಕಲ್

ಏ.8; ಪಣಪಿಲ

16:ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳ

4:ಉಡುಪಿ ಜಿಲ್ಲೆಗೆ ಮೀಸಲಿರುವ ಕಂಬಳ

1:ಕಾಸರಗೋಡು ಜಿಲ್ಲೆಗೆ ನೀಡಿರುವ ಕಂಬಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT