ಭಾನುವಾರ, ಮೇ 16, 2021
22 °C

ಕಂಬಳ ಕೂಟದ ಪದಕಗಳ ವೀರ ‘ಬೋಳಂತೂರು ಕಾಟಿ’ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಬೋಳಂತೂರುಗುತ್ತು ಗಂಗಾಧರ ರೈ ಇವರಿಗೆ ಅವಿಭಜಿತ ಜಿಲ್ಲೆಯ ಕಂಬಳ ಕೂಟಗಳಲ್ಲಿ ಗರಿಷ್ಠ ಚಿನ್ನದ ಪದಕಗಳನ್ನು ತಂದು ಕೊಟ್ಟ ಜನಪ್ರಿಯ ಕೋಣ ‘ಬೋಳಂತೂರು ಕಾಟಿ’ ವಯೋಸಹಜ ಅನಾರೋಗ್ಯದಿಂದ ಸೋಮವಾರ ಸಾವನ್ನಪ್ಪಿದೆ.

ಬಾರ್ಕೂರು ದೇವದಾಸ ಗಡಿಯಾರ್ ಅವರಲ್ಲಿ 6 ವರ್ಷಗಳ ತನಕ ಬೆಳೆದಿದ್ದ ಕಾಟಿ, ಬಳಿಕ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಾರಿಗೆ ಶಿರ್ವ ಕಂಬಳದಲ್ಲಿ ಚಿನ್ನದ ಪದಕ ಗೆದ್ದಿತ್ತು.

ಜೂನಿಯರ್ ವಿಭಾಗದಲ್ಲಿ 3 ವರ್ಷ ಅತ್ಯಧಿಕ ಪದಕ ಗೆದ್ದ ಕಾಟಿಗೆ ಜೊತೆ ಹುಡುಕುವುದೇ ಕಷ್ಟಕರವಾಗಿತ್ತು. ಇದೇ ವೇಳೆ ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ‘ಮೋಡೆ’ ಕೋಣವನ್ನು ಜೊತೆಯಾಗಿ ಮಾಡಿದ ವರ್ಷ ಕಾಟಿಗೆ ‘ಚಾಂಪಿಯನ್’ ಪುರಸ್ಕಾರ ಲಭಿಸಿತ್ತು.

1998ರಲ್ಲಿ ಬಾರ್ಕೂರು ದೇವದಾಸ ಗಡಿಯಾರ್ ಅವರು ಕಾಟಿಯನ್ನು ಬೆಳುವಾಯಿ ಸದಾನಂದ ಶೆಟ್ಟರಿಗೆ ಹಸ್ತಾಂತರಿಸಿದ ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ ‘ಕಾಟಿ- ಮಾತಿಬೆಟ್ಟು’ ಜೋಡಿ ಗರಿಷ್ಠ ಬಹುಮಾನ ಗೆದ್ದುಕೊಂಡಿತು.

2001ರಲ್ಲಿ ಬೆಳುವಾಯಿ ಸದಾನಂದ ಶೆಟ್ಟರಿಂದ ಬೋಳಂತೂರು ಗಂಗಾಧರ ರೈ ‘ಕಾಟಿ -ಮಾತಿಬೆಟ್ಟು’ ಜೋಡಿ ಖರೀದಿಸಿ ನಿರಂತರ ಮೂರು ವರ್ಷ ‘ಚಾಂಪಿಯನ್’ ಪ್ರಶಸ್ತಿಗೆ ಪಾತ್ರವಾಗಿತ್ತು. 2012ರ ತನಕ ಹಗ್ಗ ಹಿರಿಯ ವಿಭಾಗದಲ್ಲಿ ಓಡಿದ ಕಾಟಿ, 2015ರಲ್ಲಿ ಕನೆ ಹಲಗೆ ವಿಭಾಗದಲ್ಲಿಯೂ ಬಹುಮಾನ ಗೆದ್ದುಕೊಂಡಿತು.

ಪುತ್ತೂರಿನಲ್ಲಿ ನಡೆದ 25ನೇ ವರ್ಷದ ಕಂಬಳ ಕೂಟದಲ್ಲಿ ಕಾಟಿಗೆ ನಡೆದ ವಿಶೇಷ ಸನ್ಮಾನ ಜಿಲ್ಲೆಯಲ್ಲಿ ಗಮನ ಸೆಳೆದಿತ್ತು. ಕಳೆದ 8 ವರ್ಷಗಳಿಂದ ಕಂಬಳಾಭಿಮಾನಿ ಅನೀಶ್ ನಾರ್ನಕೊಡಿ ಎಂಬವರು ಕಾಟಿಯನ್ನು ಆರೈಕೆ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು