ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ವೈಭವಕ್ಕೆ ಮನಸೋತ ಕುಡ್ಲ

ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ; ಸಾಂಸ್ಕೃತಿಕ ಮೆರವಣಿಗೆ-ದಿಬ್ಬಣ
Last Updated 10 ಜನವರಿ 2020, 15:29 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಶುಕ್ರವಾರ ನಗರದ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಬೃಹತ್ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.

ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹತ್ತು ದಿನಗಳ ಕಾಲ ಅತ್ಯಂತ ವ್ಯವಸ್ಥಿತವಾಗಿ ನಡೆಯುವ ಹಬ್ಬವು ತುಳುನಾಡಿನ ಇತಿಹಾಸ, ಕಲೆ, ಸಂಪ್ರದಾಯಗಳನ್ನು ಇಡೀ ಪ್ರಪಂಚಕ್ಕೆ ಸಾರುವ ಕಾರ್ಯವಾಗಬೇಕು. ಅದ್ಭುತ ಕರಾವಳಿ ಉತ್ಸವದಲ್ಲಿ ರಾಜ್ಯದ ಮೂಲೆಗಳಿಂದ ಬಂದಿರುವ ಕಲಾ ತಂಡಗಳು ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ನೆಹರೂ ಮೈದಾನದಿಂದ ಹೊರಟ ಮೆರವಣಿಗೆಯು ಎ.ಬಿ ಶೆಟ್ಟಿ ವೃತ್ತ, ನೆಹರು ಮೈದಾನ ರಸ್ತೆ, ಗಡಿಯಾರ ಗೋಪುರ, ಯು.ಪಿ. ಮಲ್ಯ ರಸ್ತೆ, ಹಂಪನಕಟ್ಟೆ ವೃತ್ತ, ಕಾರ್ನಾಡ್ ಸದಾಶಿವ ರಾವ್ ರಸ್ತೆ (ಕೆ.ಎಸ್. ರಾವ್ ರೋಡ್), ಬಿಷಪ್ ಹೌಸ್, ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ಸರ್ಕಲ್), ಪಿವಿಎಸ್ ಜಂಕ್ಷನ್, ಮಹಾತ್ಮ ಗಾಂಧಿ ರಸ್ತೆ, ಬಳ್ಳಾಲ್‌ಬಾಗ್, ಮಹಾನಗರ ಪಾಲಿಕೆ ಮುಂಭಾಗದ ಮೂಲಕ ಕರಾವಳಿ ಉತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು.

ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಕರಾವಳಿಯ ಸಾಂಸ್ಕೃತಿಕ ಸಂಭ್ರಮದೊಂದಿಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮೆರವಣಿಗೆಯು ಸಾಗಿ ಬಂತು. ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ಇತ್ಯಾದಿಗಳನ್ನು ಒಳಗೊಂಡ ಗಿರಿ-ಸಿರಿ ಜಾನಪದ ಕಲಾ ತಂಡದಿಂದ ಕೊರಗರ ಡೋಲು-ಕೋಲು ಕುಣಿತ, ರಮೇಶ ಕನ್ಯಾನ, ಶಿವಗಿರಿ ಹೊಯಿಗೆಗದ್ದ ತಂಡದಿಂದ ಕರಡಿ-ಸಿಂಹ ನೃತ್ಯ, ರಾಮನಗರ ತಂಡದಿಂದ ಪೂಜಾ ಕುಣಿತ, ಕಾರವಾರ ತಂಡದಿಂದ ಸುಗ್ಗಿ ಕುಣಿತ, ಹಾವೇರಿ ತಂಡದಿಂದ ಬೇಡರ ಕುಣಿತ, ಚಿಕ್ಕಮಗಳೂರು ತಂಡದಿಂದ ಮಹಿಳಾ ವೀರಗಾಸೆ, ಮಾಗಡಿ ತಂಡದಿಂದ ನಂದಿಧ್ವಜ, ಗದಗ ತಂಡದಿಂದ ಕೋಲಾಟ, ಮೈಸೂರು ತಂಡದಿಂದ ವೀರಭದ್ರ ಕುಣಿತ, ಶಿವಮೊಗ್ಗ ತಂಡದಿಂದ ಮಹಿಳಾ ಡೊಳ್ಳು, ಚಾಮರಾಜನಗರ ತಂಡದಿಂದ ಗೊರವರ ಕುಣಿತ, ತುಮಕೂರು ತಂಡದಿಂದ ಸೋಮನ ಕುಣಿತ, ಧಾರವಾಡ ತಂಡದಿಂದ ಜಗ್ಗಲಿಗೆ, ಹಾವೇರಿ ತಂಡದಿಂದ ಪುರವಂತಿಕೆ ಗಮನ ಸೆಳೆದವು.

ಅನೇಕ ವಿದ್ಯಾ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಲ ಮುಂತಾದ ಸಂಸ್ಥೆಗಳೂ ಪಾಲ್ಗೊಂಡಿದ್ದವು. ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್ ಗುರುಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪ್ರದೀಪ್‌ಕುಮಾರ ಕಲ್ಕೂರ ಉಪಸ್ಥಿತರಿದ್ದರು.

ವಿಶೇಷ ವ್ಯವಸ್ಥೆ: ಎಲ್ಲ ಮಕ್ಕಳು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಉಪ್ಪಿಟ್ಟು, ಅಪ್ಪ, ಬಾಳೆಹಣ್ಣು, ಬಾದಾಮಿ ಹಾಲು, ಲಾಡು, ಕಿತ್ತಲೆ, ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT