ಭಾನುವಾರ, ಸೆಪ್ಟೆಂಬರ್ 19, 2021
25 °C
ಜಿಲ್ಲೆಯ ವಿವಿಧೆಡೆ ‘ಕಾರ್ಗಿಲ್‌ ವಿಜಯ’ ದಿನಾಚರಣೆ: ವೀರ ಯೋಧರ ಸ್ಮಾರಕಕ್ಕೆ ಪುಷ್ಪನಮನ

ಸ್ಮಾರಕ ಅಭಿವೃದ್ಧಿಗೆ ₹ 25 ಲಕ್ಷ: ಕಾಮತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕದ್ರಿಯ ಹುತಾತ್ಮ ಸ್ಮಾರಕ ಅಭಿವೃದ್ಧಿಗೆ ₹25 ಲಕ್ಷ ಅನುದಾನ ನೀಡುವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಕಾರ್ಗಿಲ್ ವಿಜಯ ದಿನದ ಅಂಗವಾಗಿ ಕದ್ರಿಯ ಹುತಾತ್ಮ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಅನೇಕ ಯೋಧರು ಬಲಿದಾನ ಮಾಡಿದ್ದಾರೆ. ಅವರೆಲ್ಲರನ್ನೂ ರಾಜಕೀಯ ರಹಿತವಾಗಿ ಗೌರವಿಸುವ ಕೆಲಸವಾಗಬೇಕು. ಮಾತೃಭೂಮಿಯ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಭಾರತ ಎಂದೆಂದಿಗೂ ಶಾಂತಿಯನ್ನು ಬಯಸುವ ರಾಷ್ಟ್ರ. ಆದರೆ ಅದನ್ನು ಅಸಹಾಯತೆ ಎಂದು ಭಾವಿಸಿದರೆ ಕಾರ್ಗಿಲ್ ಕದನ, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಮೇಲಿನ ದಾಳಿಯ ಮೂಲಕ ಸೇನಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಡುವಲ್ಲಿ ಭಾರತೀಯ ಸೇನೆ ಸಮರ್ಥವಾಗಿದೆ ಎಂದರು.

ಪಾಲಿಕೆಯ ಸದಸ್ಯೆ ಶಕಿಲಾ ಕಾವಾ, ಬಿಜೆಪಿ ಮುಖಂಡರಾದ ರೂಪಾ ಡಿ. ಬಂಗೇರ, ಪೂಜಾ ಪೈ, ಪ್ರಶಾಂತ್ ಪೈ, ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ, ಕಾರ್ಯದರ್ಶಿ ಕ್ಯಾ.ದೀಪಕ್ ಅಡ್ಯಂತಾಯ, ಸಂಘದ ನಿಕಟಪೂರ್ವ ಅಧ್ಯಕ್ಷ ವಿಕ್ರಮ್ ದತ್ತ, ನಿವೃತ್ತ ಸೇನಾಧಿಕಾರಿಗಳಾದ ಬ್ರಿಗೇಡಿಯರ್ ಐ.ಎನ್ ರೈ, ಕರ್ನಲ್ ಎನ್.ಶರತ್ ಭಂಡಾರಿ, ಕರ್ನಲ್ ಜಯಚಂದ್ರನ್, ರೋಟರಿ ಪ್ರಮುಖರಾದ ಜೆ.ಪಿ ರೈ, ಲಯನ್ಸ್ ಪ್ರಮುಖರಾದ ವಿಜಯ ವಿಷ್ಣು ಮಯ್ಯ, ರೋಟರಿ ಸಂಸ್ಥೆಯ ಪ್ರಮುಖರು, ಲಯನ್ಸ್ ಸಂಸ್ಥೆಯ ಪ್ರಮುಖರು ಭಾಗವಹಿಸಿದ್ದರು.

ಶಾರದಾ ವಿದ್ಯಾಲಯ: ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ಯುದ್ಧದ ಅನುಭವವನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ವೀರಯೋಧ, ಸೇವಾ ನಿವೃತ್ತ ಹವಾಲ್ದಾರ್ ಆರ್. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸುನೀತಾ ವಿ. ಮಡಿ, ಹುತಾತ್ಮ ಯೋಧರೆಲ್ಲರಿಗೂ ಗೌರವ ನಮನ ಸಲ್ಲಿಸಿದರು.

ಹವಾಲ್ದಾರ ಆರ್. ಪ್ರಕಾಶ್ ಅವರು, ಯುದ್ಧದ ಸಂಗತಿಗಳನ್ನು ನೆನೆಪಿಸಿಕೊಂಡರು. ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ ಕುಮಾರ ಕಲ್ಕೂರ ಮಾತನಾಡಿದರು. ವಿದ್ಯಾ ಸಂಸ್ಥೆಯ ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಉಪ-ಪ್ರಾಂಶುಪಾಲ ದಯಾನಂದ ಕಟೀಲ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆ, ದೀಪಪ್ರಜ್ವಲನೆಯ ನಂತರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಲಾಯಿತು. ವಿನಮ್ರ ಸ್ವಾಗತಿಸಿದರು. ಮಹತಿ ವಂದಿಸಿದರು. ಚೇತನ ನಿರೂಪಿಸಿದರು.

ಮಂಗಳೂರು ವಿವಿ: ಕಾರ್ಗಿಲ್ ವಿಜಯೋತ್ಸವ
ಮುಡಿಪು:
‘ಅದಮ್ಯ ಸಾಹಸ, ಅಪ್ರತಿಮ ಹೋರಾಟದ ಮೂಲಕ ಶತ್ರು ದೇಶವನ್ನು ಸದೆಬಡೆದು ದೇಶದ ಘನತೆ‌ ಗೌರವ ಹೆಚ್ಚಿಸಿದ ಕೀರ್ತಿ ಸೈನಿಕರಿಗೆ ಸಲ್ಲುತ್ತದೆ. ಕಾರ್ಗಿಲ್‌ ವಿಜಯ ದಿನವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಮೂಲಕ ಸೈನಿಕರ ತ್ಯಾಗ, ದೇಶ ಸೇವೆಯನ್ನು ಸ್ಮರಿಸಿಕೊಳ್ಳಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಶಹೀದ್ ಸ್ಥಳದಲ್ಲಿ ಸೋಮವಾರ ಕಾರ್ಗಿಲ್ ವಿಜಯ ದಿನಾಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ., ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ಪ್ರೊ.ನಾರಾಯಣ, ಪ್ರೊ.ಪ್ರಶಾಂತ್ ನಾಯ್ಕ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.