ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಆರ್ಥಿಕತೆಯಲ್ಲಿ ದೇಶವನ್ನು 3ನೇ ಸ್ಥಾನಕ್ಕೇರಿಸಲು ಶಕ್ತಿ ತುಂಬಿ: ಮೋದಿ

Published 3 ಮೇ 2023, 9:50 IST
Last Updated 3 ಮೇ 2023, 10:20 IST
ಅಕ್ಷರ ಗಾತ್ರ

ಮಂಗಳೂರು: 'ಜಗತ್ತಿನ ಆರ್ಥಿಕತೆಯಲ್ಲಿ 9 ನೇ ಸ್ಥಾನದಲ್ಲಿದ್ದ ಭಾರತ ನಮ್ಮ ಆಳ್ವಿಕೆಯಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಭಾರತ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬುದು ನನ್ನ ಕನಸು. ಈ ಕನಸು ನನಸಾಗಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಕೋರಿದರು.

ಇಲ್ಲಿನ ಮೂಲ್ಕಿ ಕೊಳ್ನಾಡುವಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಾರ್ಥ ಬುಧವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

'ಇಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂಬ ಮಾತ್ರಕ್ಕೆ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಪರಿಭಾವಿಸಿದರೆ ಆಗದು. ನನ್ನ ಪರವಾಗಿ ನೀವು ಮನೆಮನೆಗೆ ತೆರಳಿ ಮತ ಯಾಚಿಸಬೇಕು. ನನಗಾಗಿ ಈ ಕೆಲಸವನ್ನು ಮಾಡುತ್ತೀರಲ್ಲ' ಎಂದು ಸಭಿಕರನ್ನು ಪ್ರಶ್ನಿಸಿದ ಮೋದಿ, 'ಇದಕ್ಕೆ ಸಹಮತ ಇರುವವರು ಮೊಬೈಲ್‌ ಟಾರ್ಚ್‌ ಆನ್ ಮಾಡುವಂತೆ ಕೋರಿದರು. ಮೋದಿ...ಮೋದಿ... ಉದ್ಘಾರದೊಂದಿಗೆ ಸಭಿಕರು ಮೊಬೈಲ್ ಟಾರ್ಚ್ ಆನ್ ಮಾಡಿ ಕೈ ಬೀಸುತ್ತಾ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

'ನವೋದ್ಯಮಗಳ ಅಭಿವೃದ್ಧಿಯಲ್ಲಿ ಕರ್ನಾಟಕ ತನ್ನ ತಾಕತ್ತನ್ನು ತೋರಿಸಿದೆ. ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ದೇಶದ‌ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ. ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಅದ್ಭುತ ಕಾರ್ಯಗಳಾಗುತ್ತಿವೆ. ಇಲ್ಲಿ ಹೊಸ ಆವಿಷ್ಕಾರಗಳ ಹೊಸ ಅಲೆ ಸೃಷ್ಟಿಯಾಗಿದೆ' ಎಂದು ಶ್ಲಾಘಿಸಿದ ಮೋದಿ, 'ಜಗತ್ತಿನಲ್ಲಿ ಭಾರತ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಕರ್ನಾಟಕದ ನೆರವು ಅತ್ಯಗತ್ಯ. ಇದನ್ನು ಮತದಾರರಿಗೂ ಮನವರಿಕೆ ಮಾಡಿಕೊಡಿ' ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊದ ದಿಕ್ಕು ತೋರಿಸಿವೆ. ಬ್ಯಾಂಕ್ ಗಳ ತೊಟ್ಟಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪ್ರದೇಶವನ್ನು ಆರ್ಥಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಯುವಶಕ್ತಿಯ ಕೊಡುಗೆ ಮಹತ್ತರವಾದುದು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

'ಕರಾವಳಿ ತೀರದ ಹಾಗೂ ಮೀನುಗಾರರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಿದರೆ, ರಾಜ್ಯ ಸರ್ಕಾರ ಮತ್ಸ್ಯ ಸಿರಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿತು. ನಾನು ಅಧಿಕಾರಕ್ಕೆ ಬರುವವರೆಗೆ ಮೀನುಗಾರರ ಬಗ್ಗೆ ಯಾವ ಸರ್ಕಾರವೂ ಗಮನ ವಹಿಸಿರಲಿಲ್ಲ. ನಾವು ಅವರಿಗಾಗಿ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸಿದೆವು ಕರಾವಳಿ ತೀರದ ಅಭಿವೃದ್ಧಿ ಗಾಗಿ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದೇವೆ' ಎಂದರು

ತುಳುವಿನಲ್ಲೇ ಭಾಷಣ ಆರಂಭ ಮಾಡಿದ ಮೋದಿ, 'ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಸೊಲುಮೆಲ್ '(ಪರಶುರಾಮ‌ ಕ್ಷೇತ್ರದ ನನ್ನ ಪ್ರೀತಿಯ ತುಳುಮಾತೆಯ ಮಕ್ಕಳಿಗೆ ನಮಸ್ಕಾರ ಗಳು) ಎಂದರು. ನಾರಾಯಣ ಗುರುಗಳ ಹೆಸರನ್ನೂ ಉಲ್ಲೇಖಿಸಿದರು. ದಕ್ಷಿಣ ಕನ್ನಡದ ಮತ್ತು ಉಡುಪಿ ಜಿಲ್ಲೆಗಳು ಶೈಕ್ಷಣಿಕ‌ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಈ ಜಿಲ್ಲೆಯ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸಿದರು. ಕರ್ನಾಟಕವನ್ನು ಉದ್ಯೋಗ, ಕೃಷಿ, ಆರೋಗ್ಯ, ಮೀನುಗಾರಿಕೆ ಕ್ಷೇತ್ರಗಳಲ್ಲಿ ನಂಬರ್ ವನ್ ರಾಜ್ಯವನ್ನಾಗಿ ರೂಪಿಸಲು ಬಿಜೆಪಿಗೆ ಮತ ನೀಡಿ' ಎಂದರು.

'ಕರ್ನಾಟಕದಲ್ಲಿ ಅಸ್ಥಿರ ಸರ್ಕಾರ ಬಂದರೆ, ಈ ರಾಜ್ಯದ ಭವಿಷ್ಯವೂ ಅಸ್ಥಿರವಾಗಲಿದೆ‌' ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಘಟಕದ‌ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂಧನ‌ ಸಚಿವ ಸಚಿವ ಸುನಿಲ್ ಕುಮಾರ್, ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದಕ್ಣಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಭಾಗೀರಥಿ ಮುರುಳ್ಯ, ಆಶಾ ತಿಮ್ಮಪ್ಪ ಗೌಡ, ಹರೀಶ್ ಪೂಂಜ, ರಾಜೇಶ್ ನಾಯ್ಕ್ ಉಳಿಪಾಡಿ, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಸತೀಶ್ ಕುಂಪಲ, ಉಡುಪಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಸಂಜೀವ ಮಠಂದೂರು ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT