ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಆಧಾರ್ ತೋರಿಸದ ಶಾಲಾ ವಿದ್ಯಾರ್ಥಿನಿಯರ ಕೆಳಗಿಳಿಸಿದ ನಿರ್ವಾಹಕ

ಕುಂಪಲ: ಬಸ್‌ ನಿಲ್ಲಿಸಿ ತರಾಟೆಗೆ ತೆಗೆದುಕೊಂಡ ಸ್ಥಳೀಯರು
Published 24 ಆಗಸ್ಟ್ 2023, 16:23 IST
Last Updated 24 ಆಗಸ್ಟ್ 2023, 16:23 IST
ಅಕ್ಷರ ಗಾತ್ರ

ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದೆ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯ ಬಸ್‌ನಲ್ಲಿ ಪ್ರಯಾಣಿಸಿದ ಐವರು ವಿದ್ಯಾರ್ಥಿನಿಯರನ್ನು ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿದ ಆರೋಪದ ಮೇಲೆ ಸ್ಥಳೀಯರು ಕುಂಪಲದಲ್ಲಿ ಬಸ್‌ ತಡೆದು ನಿಲ್ಲಿಸಿ ನಿರ್ವಾಹಕನನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.

‘ಮಂಗಳೂರು–ಕುಂಪಲ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯ ಬಸ್‌ನಲ್ಲಿ ಗುರುವಾರ ಬೆಳಿಗ್ಗೆ ಪ್ರಯಾಣಿಸಿದ ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಮತ್ತು ಮೂರನೇ ತರಗತಿಯ ಐವರು ವಿದ್ಯಾರ್ಥಿನಿಯರಲ್ಲಿ ಆಧಾರ್‌ ಕಾರ್ಡ್‌ ಇರಲಿಲ್ಲ. ಬಸ್‌ನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಅವರು, ‘ಆಧಾರ್ ಕಾರ್ಡ್ ತೋರಿಸದಿದ್ದರೆ ಉಚಿತ ಪ್ರಯಾಣಕ್ಕೆ ನಿಮಗೆ ಅವಕಾಶ ಇಲ್ಲ’ ಎಂದು ಟಿಕೆಟ್‌ಗೆ ಹಣ ಕೇಳಿದ್ದರು. ಹಣ ನೀಡಿ ಟಿಕೆಟ್‌ ಪಡೆಯದ ಕಾರಣಕ್ಕೆ ಆ ಹೆಣ್ಣು ಮಕ್ಕಳನ್ನು ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸುವ ಮೂಲಕ ನಿರ್ವಾಹಕ ಅಮಾನವೀಯವಾಗಿ ವರ್ತಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಈ ಬಸ್‌ನಲ್ಲಿ ಯಾವತ್ತೂ ಕಾರ್ಯನಿರ್ವಹಿಸುವ ನಿರ್ವಾಹಕ ರಜೆ ಮೇಲಿದ್ದರು. ಹುಸೇನ್ ಸಾಬ್ ಬದಲಿ ಕರ್ತವ್ಯದಲ್ಲಿದ್ದರು. ಘಟನೆಯನ್ನು ಬಸ್ಸಿನಲ್ಲಿ ಕುಳಿತಿದ್ದ ಕುಂಪಲ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ‌ ಗುಲಾಬಿ ಅವರು ಗಮನಿಸಿದ್ದರು’ ಎಂದು ಅವರು ತಿಳಿಸಿದರು.

ಕುಂಪಲ ಶಾಲೆಯ ಎದುರು ಸಂಜೆ ಅದೇ ಬಸ್ ಅನ್ನು ತಡೆದು ನಿಲ್ಲಿಸಿದ ಸ್ಥಳೀಯರು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು, ‘ಮಕ್ಕಳ ಜೊತೆ ಮಾನವೀಯವಾಗಿ ವರ್ತಿಸಿದ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ವಿದ್ಯಾರ್ಥಿಗಳನ್ನು ಬಸ್‌ನಿಂದ ಕೆಳಕ್ಕಿಳಿಸಿದ್ದನ್ನು ನಿರ್ವಾಹಕ ಒಪ್ಪಿಕೊಂಡಿದ್ದಾರೆ. ಆದರೆ, ಆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯವರಲ್ಲ ಪ್ರೌಢಶಾಲೆಯವರು ಎಂದು ನಿರ್ವಾಹಕ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಥಮಿಕ ಶಾಲೆಗಳ ಎಲ್ಲ ವಿದ್ಯಾರ್ಥಿಗಳು ಬಸ್‌ಪಾಸ್‌ ಅಥವಾ ಆಧಾರ್‌ ಕಾರ್ಡ್‌ನಂತಹ ದಾಖಲೆ ಇಲ್ಲದೆಯೇ ಉಚಿತವಾಗಿ ಪ್ರಯಾಣಿಸಲು ಅವಕಾಶ ಇದೆ. ಅವರನ್ನು ಕೆಳಗಿಳಿಸಿದ್ದರೆ ತಪ್ಪಾಗುತ್ತದೆ. ಪ್ರೌಢಶಾಲಾ ಮಕ್ಕಳು ಬಸ್‌ಪಾಸ್‌ ಅಥವಾ ಆಧಾರ್‌ ಕಾರ್ಡ್‌ ತೋರಿಸಬೇಕಾಗುತ್ತದೆ. ಆದರೂ, ಅರ್ಧ ದಾರಿಯಲ್ಲಿ ಕೆಳಗಿಸುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT