ಬುಧವಾರ, ಡಿಸೆಂಬರ್ 11, 2019
26 °C
ಕೋಮು ಸೌಹಾರ್ದತೆಗೆ ಸಾಕ್ಷ್ಯಿಕುಕ್ಕದಕಟ್ಟೆ ಆಟ

50 ದಾಟಿ ಮುನ್ನಡೆದ ಕಟೀಲಿನ `ಶ್ರೀದೇವಿ ಮಹಾತ್ಮೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಜ್ಪೆ: ಗುರುಪುರ ಕುಕ್ಕುದಕಟ್ಟೆಯಲ್ಲಿ 54 ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು, ಕೋಮು ಸೌಹಾರ್ದತೆಯ ಸಂಕೇತವಾಗಿ ಇಂದು ಖ್ಯಾತಿ ಗಳಿಸಿದೆ.

ಊರಿನ ಸಮಸ್ತರಿಂದ ಹಣ ಸಂಗ್ರಹಿಸಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಮೇಳದ `ಶ್ರೀದೇವಿ ಮಹಾತ್ಮೆ'ಯನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ಕುಕ್ಕುದಕಟ್ಟೆಯ ಹೋಟೆಲ್ ಮಾಲೀಕರಾಗಿದ್ದ ಗೌರಮ್ಮ ಮುಂದಾಳತ್ವದಲ್ಲಿ ಮೊದಲ ಎರಡು ವರ್ಷ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತ್ತು. ಬಳಿಕ ಆರ್ಥಿಕ ಅಡಚಣೆ ಕಾರಣ ಅವರು ಯಕ್ಷಗಾನ ಪ್ರದರ್ಶನ ಮುಂದಾಳತ್ವದಿಂದ ಹಿಂದೆ ಸರಿದರು. ಆ ಹೊತ್ತಿಗೆ ಸ್ಥಳೀಯ ಹೊಯಿಗೆ ಕೂಲಿ ಕಸುಬುದಾರರಾದ ಭಾಸ್ಕರ ಮುಂಡ, ಜಾರಪ್ಪ ಪೂಜಾರಿ, ಹಸನ್ ಬ್ಯಾರಿ, ಕೊರಗಪ್ಪ ಸಫಲಿಗ, ನಾರಾಯಣ ಸಫಲಿಗ, ಹರಿಯಪ್ಪ ಪೂಜಾರಿ, ದೇವಕಿ ಬಿ. ಶೆಟ್ಟಿ, ಕಾಂತಪ್ಪ ಮುಂಡ, ಜಲಜಾ, ವಾಮಯ್ಯ ಪೂಜಾರಿ ಜಲ್ಲಿಗುಡ್ಡೆ, ಅಚ್ಚು ಸಲ್ದಾನ, ದೇವು ಸಫಲಿಗ, ಪದ್ಮನಾಭ ಸಫಲಿಗ, ಕುಟ್ಟಿ ಸಫಲಿಗ, ವಿಶ್ವನಾಥ ಸಫಲಿಗ, ಜಯಶೀಲ ಶೆಟ್ಟಿ, ಸ್ಟ್ಯೇನಿ ಸಲ್ಡಾನ, ಮೊಹಮ್ಮದ್ ಬ್ಯಾರಿ, ಅಂಗಡಿ ಮಹಾಬಲ ಪೂಜಾರಿ ಮೊದಲಾದವರು ಆಟ ಮುಂದುವರಿಸಲು ತೀರ್ಮಾನಿಸಿ ಮೂರನೇ ವರ್ಷವೂ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಸಿಕೊಟ್ಟರು. ಬಳಿಕ ನಡೆದುದೆಲ್ಲ ಇತಿಹಾಸ.

ಹಿಂದೆ ಒಂದೆರಡು ಸಾವಿರ ರೂಪಾಯಿಯಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಈಗ ಬಯಲಾಟದ ಖರ್ಚು ಲಕ್ಷ ದಾಟುತ್ತಿದೆ. ಇಲ್ಲಿನ ಯಕ್ಷಗಾನಕ್ಕೆ ವಿದೇಶಗಳಲ್ಲಿರುವ ಸ್ಥಳೀಯ ಅಭಿಮಾನಿಗಳೂ ದೇಣಿಗೆ ನೀಡುತ್ತಿದ್ದಾರೆ.

ಯಕ್ಷಗಾನ ನಡೆಯುವುದಕ್ಕಿಂತ ಒಂದು ವಾರ ಮುಂಚೆ ಕುಕ್ಕುದಕಟ್ಟೆ ಗದ್ದೆಯಲ್ಲಿ ರಂಗಸ್ಥಳ ನಿರ್ಮಿಸಲಾಗುತ್ತಿತ್ತು. ಬಳಿಕ ಯಕ್ಷಗಾನದ ದಿನದಂದು ಸ್ಥಳೀಯರೇ ಒಟ್ಟು ಸೇರಿ ಚಿಲಿಂಬಿಗುಡ್ಡೆಯಿಂದ ಅಡಿಕೆ ಮರ ತರುವುದು, ಬಣ್ಣದ ಕಾಗದದ ಅಲಂಕಾರ ಮಾಡುವುದು, ಕುರ್ಚಿ ತರುವುದು, ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು (ಲಕ್ಕಿಡಿಪ್ ಪ್ರಾಯೋಜಿಸುವುದು)... ಹೀಗೆ ಎಲ್ಲ ಕೆಲಸ ಮಾಡುತ್ತಿದ್ದರು. ಬೀಡಿ ಕಾರ್ಮಿಕರೂ ಈ ಆಟಕ್ಕೆ ತಮ್ಮಿಂದಾದ ಕಿರು ದೇಣಿಗೆ ನೀಡುತ್ತಿದ್ದರು.

ಕಟೀಲು ದೇವಳದಲ್ಲಿ ಒಂದು ತಿರುಗಾಟದ ಮೇಳವಿದ್ದ ಕಾಲವದು. ಪ್ರತಿ ವರ್ಷ ಗೆಜ್ಜೆ ಕಟ್ಟಿ ಮೇಳ ಆರಂಭವಾದ ಪ್ರಥಮ ವಾರದ ಪ್ರಥಮ ಶನಿವಾರ ಗುರುಪುರ ಕುಕ್ಕದಕಟ್ಟೆಯಲ್ಲಿ ಶ್ರೀದೇವಿ ಮಹಾತ್ಮೆ ವಾಡಿಕೆಯಂತೆ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಈಗ ಒಂದು ವಾರ ತಡವಾಗಿಯಾದರೂ ಶನಿವಾರದಂದೇ ಇಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು