ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು ಮೇಳದ ಯಕ್ಷಗಾನಕ್ಕೆ ಕಾಲಮಿತಿ: ಸೇವಾರ್ಥಿಗಳ ವಿರೋಧ, ಕಟೀಲಿಗೆ ಪಾದಯಾತ್ರೆ

Last Updated 16 ಅಕ್ಟೋಬರ್ 2022, 15:38 IST
ಅಕ್ಷರ ಗಾತ್ರ

ಮಂಗಳೂರು: ಕಟೀಲು ಮೇಳದ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸುವುದನ್ನು ವಿರೋಧಿಸಿ ಬಜಪೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರ ನಡೆಸಲು ಹಾಗೂ ಈ ನಿರ್ಧಾರ ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿಗಳ ಪದಾಧಿಕಾರಿಗಳು ಮತ್ತು ಕಾಯಂ ಸೇವಾದಾರರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.

‘ಯಕ್ಷಗಾನದ ಕಾಲಮಿತಿ ಪ್ರಯೋಗದ ಪ್ರಸ್ತಾವ ಕೈಬಿಡುವಂತೆ ಒತ್ತಾಯಿಸಿ ಸೇವಾ ಸಮಿತಿಗಳು ಮತ್ತು ಕಾಯಂ ಸೇವಾದಾರರು ಈಚೆಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಕದ್ರಿ ದೇವಸ್ಥಾನದ ವಠಾರದಲ್ಲಿಭಾನುವಾರ ಮತ್ತೊಮ್ಮೆ ಸಭೆ ನಡೆಸಲಾಯಿತು.

ದಯಾನಂದ ಜಿ. ಕತ್ತಲಸಾರ್ ಮಾತನಾಡಿ, ‘ಕಟೀಲು ಮೇಳದ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಿದರೆ ಪರಂಪರೆಗೆ ಚ್ಯುತಿ ಬರುತ್ತದೆ. ಯಕ್ಷಗಾನದ ಮೂಲ ಆಶಯ ಅಪೂರ್ಣವಾಗುತ್ತದೆ. ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದಂತಾಗುತ್ತದೆ’ ಎಂದರು.

ಸೇವಾ ಸಮಿತಿಯ ಅಶೋಕ ಕೃಷ್ಣಾಪುರ, ‘ಕಟೀಲು ಮೇಳದ ಯಕ್ಷಗಾನ ಜನರ ಧಾರ್ಮಿಕ ನಂಬಿಕೆಯ ಪ್ರತೀಕ. ಈ ಕಲೆಯು ಕನ್ನಡ ಸಾಹಿತ್ಯ ಉಳಿಸಲು, ಧಾರ್ಮಿಕ ಶಿಕ್ಷಣ ನೀಡಲೂ ನೆರವಾಗುತ್ತಿದೆ. ಅನೇಕರಿಗೆ ಜೀವನೊಪಾಯವನ್ನು ಕಲ್ಪಿಸಿರುವ ಈ ಕಲೆ ನಾಡಿನ ಸಂಸ್ಕೃತಿಯನ್ನೂ ಸಮೃದ್ಧಗೊಳಿಸಿದೆ. ಇದನ್ನು ಪಾರಂಪರಿಕ ರೂಪದಲ್ಲೇ ಉಳಿಸುವುದು ಸರ್ಕಾರದ ಜವಾಬ್ದಾರಿ’ ಎಂದರು.

’2002ರಲ್ಲಿ ಸರ್ಕಾರ ಜಾರಿಗೊಳಿಸಿದ್ದ ನಿಯಮದ ಪ್ರಕಾರ ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳುಸಲು ಸುಪ್ರೀಂ ಕೋರ್ಟ್‌ ಸೂಚಿಸಿರುವುದರಿಂದ ಕಾಲಮಿತಿ ಪ್ರಯೋಗದ ಮೊರೆ ಹೋಗುತ್ತಿದ್ದೇವೆ’ ಎಂದು ಕಟೀಲು ಮೇಳದವರು ಸಬೂಬು ನೀಡುತ್ತಿದ್ದಾರೆ. ಈ ನಿಯಮ ಜಾರಿಯಾಗಿ 22ವರ್ಷಗಳವರೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಈ ಹಿಂದೆ ಸುಪ್ರೀಂ ಕೋರ್ಟ್‌ ಜಲ್ಲಿಕಟ್ಟು ಮತ್ತು ಕಂಬಳವನ್ನು ನಿಷೇಧಿಸಿತ್ತು. ನಂತರ ಈ ಜಾನಪದ ಕ್ರೀಡೆಗಳಿಗೆ ಷರತ್ತುಬದ್ಧವಾಗಿ ಅನುಮತಿ ನೀಡಲಾಯಿತು. ಸಾರ್ವಜನಿಕ ರಸ್ತೆ ಪಕ್ಕದಲ್ಲಿರುವ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದ ಆಶಯಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಅಂತೆಯೇ 200 ವರ್ಷಗಳಿಗೂ ಅಧಿಕ ಇತಿಹಾಸವಿರುವ ಕಟೀಲು ಮೇಳದ ಯಕ್ಷಗಾನದ ಪರಂಪರೆಗೆ ಚ್ಯುತಿ ಬರದಂತೆ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.

ಹಿರಿಯ ಸೇವಾರ್ಥಿ ಬಂಟ್ವಾಳ ಲೋಕನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವಾರ್ಥಿಗಳಾದ ಹರೀಶ ಶೆಟ್ಟಿ ಮರಕಡ, ಅನಿಲ್‌ರಾಜ್‌ ಮಂಗಳೂರು, ಪಾಂಡುರಂಗ ಕುಕ್ಯಾನ್‌, ದುರ್ಗಾಪ್ರಸಾದ್‌ ಹೊಳ್ಳ, ರಾಜೇಶ್‌ ಕೊಂಚಾಡಿ, ಸುಧಾಕರ ಕಾಮತ್‌ ಹಾಗೂ 73 ವರ್ಷಗಳಿಂದ ಯಕ್ಷಗಾನ ಸೇವೆ ನೀಡುತ್ತಾ ಬಂದಿರುವ ಕೃಷ್ಣಪ್ಪ ಪೂಜಾರಿ ಕಾನ ಜೋಕಟ್ಟೆ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT