ಮಂಗಳವಾರ, ಮಾರ್ಚ್ 28, 2023
33 °C
ತನಿಖೆ ನಡೆಸಿ ಕ್ರಮ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭರವಸೆ

ಮಂಗಳೂರು: ಹೆಚ್ಚು ಹಣ ವಸೂಲಿ- ಆಸ್ಪತ್ರೆಗಳಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19 ರೋಗಿಗಳ ಚಿಕಿತ್ಸೆಗೆ ಹೆಚ್ಚಿನ ಬಿಲ್‌ ವಸೂಲಿ ಮಾಡಿದ ಕೆಲ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್ ಜಾರಿಗೊಳಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌. ಭೋಜೇ ಗೌಡ, ಕೆಲಸ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಇದರಿಂದಾಗಿ ರೋಗಿಗಳ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಜಿಲ್ಲೆಯ 8 ವೈದ್ಯ ಕೀಯ ಕಾಲೇಜುಗಳು ಹಾಗೂ 60 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಡಳಿತದಿಂದ ಪ್ರತಿ ಆಸ್ಪತ್ರೆಗೆ ನೋಡಲ್‌ ಅಧಿಕಾರಿಗಳು ಹಾಗೂ  ಆರೋಗ್ಯ ಮಿತ್ರರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಮಟ್ಟದ ಕುಂದುಕೊರತೆ ಆಲಿಸಲು ಸಮಿತಿ ರಚಿಸಲಾಗಿದ್ದು, 17 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, 2,802 ರೋಗಿಗಳ ಶುಲ್ಕದ ಕುರಿತು ಪರಿಶೀಲನೆ ಮಾಡಿದೆ. ಹೆಚ್ಚಿನ ಶುಲ್ಕ ಪಡೆದ 66 ಪ್ರಕರಣಗಳು ಕಂಡು ಬಂದಿದ್ದು, ಅಂತಹ ಆಸ್ಪತ್ರೆ ಗಳಿಗೆ ಶೋಕಾಸ್‌ ನೋಟಿಸ್ ಜಾರಿಗೊಳಿ ಸಲಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ಹೆಚ್ಚುವರಿ ಶುಲ್ಕವನ್ನು ರೋಗಿಗಳಿಗೆ ಮರಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜನದಟ್ಟಣೆ ನಿಯಂತ್ರಣ ಅಗತ್ಯ: ಧಾರ್ಮಿಕ ಸ್ಥಳಗಳಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನದಟ್ಟಣೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಡಾ.ರಾಜೇಂದ್ರ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 1.75ರಿಂದ ಶೇ 2.89ಕ್ಕೆ ಏರಿದೆ. ಪಕ್ಕದ ಉಡುಪಿಯಲ್ಲಿ ಶೇ 4 ಹಾಗೂ ಕಾಸರಗೋಡಿನಲ್ಲಿ ಶೇ 12 ರಷ್ಟಿದೆ. ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಹಲವು ರೋಗಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಜನರು ಬರುತ್ತಿದ್ದಾರೆ. ಮತ್ತೆ ಕೋವಿಡ್‌–19 ಉಲ್ಬಣಿಸುವ ಆತಂಕವಿದ್ದು, ಲಾಕ್‌ಡೌನ್‌ನಂತಹ ಕ್ರಮಗಳು ಅನಿವಾರ್ಯವಾಗಲಿವೆ. ಈ ಹಿನ್ನೆಲೆಯಲ್ಲಿ ಜನರ ದಟ್ಟಣೆ ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಹಲವು ಹಬ್ಬಗಳು ಬರಲಿವೆ. ಹಬ್ಬಗಳ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸ್ಪಷ್ಟ ಮಾರ್ಗಸೂಚಿಯನ್ನು ಜಾರಿಗೊಳಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಲಾಗುವುದು. ಎಲ್ಲರ ಜೊತೆಗೆ ಚರ್ಚಿಸಿ, ಅಂತಿಮ ಮಾರ್ಗಸೂಚಿಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸಚಿವ ಎಸ್‌. ಅಂಗಾರ, ಸಂಸದ ನಳಿನ್‌ಕುಮಾರ್‌ ಕಟೀಲ್‌, ಶಾಸಕರಾದ ಡಾ.ವೈ. ಭರತ್‌ ಶೆಟ್ಟಿ, ಯು.ಟಿ. ಖಾದರ್, ಡಿ.ವೇದವ್ಯಾಸ ಕಾಮತ್‌, ರಾಜೇಶ್‌ ನಾಯ್ಕ್‌, ಪ್ರತಾಪ್‌ಸಿಂಹ ನಾಯಕ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್, ಅಧಿಕಾರಿಗಳು ಇದ್ದರು.

ಒಂದು ವಾರ ಕೇರಳಕ್ಕೆ ಬಸ್‌ ಇಲ್ಲ

ಕೇರಳದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ಇನ್ನೂ ಒಂದು ವಾರ ಕೇರಳಕ್ಕೆ ಸಾರಿಗೆ ಬಸ್‌ ಸಂಚಾರ ಆರಂಭಿಸದಿರಲು ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಯಿತು.

ಕೇರಳಕ್ಕೆ ಬಸ್‌ ಸಂಚಾರ ಆರಂಭಿಸಿದರೆ, ಪ್ರಯಾಣಿಕರ ತಪಾಸಣೆ ಕಷ್ಟವಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಒಂದು ವಾರ ಕಾಯ್ದು, ಕಾಸರಗೋಡಿನಲ್ಲಿ ಪಾಸಿಟಿವಿಟಿ ದರ ಕಡಿಮೆಯಾದಲ್ಲಿ ಬಸ್‌ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು